ADVERTISEMENT

ರಾಷ್ಟ್ರಪತಿ ಚುನಾವಣೆ: ಸಂಗ್ಮಾ ನಾಮಪತ್ರ ಕ್ರಮಬದ್ಧ

​ಪ್ರಜಾವಾಣಿ ವಾರ್ತೆ
Published 3 ಜುಲೈ 2012, 8:00 IST
Last Updated 3 ಜುಲೈ 2012, 8:00 IST
ರಾಷ್ಟ್ರಪತಿ ಚುನಾವಣೆ: ಸಂಗ್ಮಾ ನಾಮಪತ್ರ ಕ್ರಮಬದ್ಧ
ರಾಷ್ಟ್ರಪತಿ ಚುನಾವಣೆ: ಸಂಗ್ಮಾ ನಾಮಪತ್ರ ಕ್ರಮಬದ್ಧ   

ನವದೆಹಲಿ (ಪಿಟಿಐ): ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿರುವ ವಿರೋಧಿ ಪಕ್ಷ ಬೆಂಬಲಿತ ಅಭ್ಯರ್ಥಿ ಪಿ.ಎ. ಸಂಗ್ಮಾ ಅವರ ನಾಮಪತ್ರವನ್ನು ಮಂಗಳವಾರ ನಿರ್ವಚನಾಧಿಕಾರಿಗಳು ಪರಿಶೀಲನೆಯ ಬಳಿಕ ಅಂಗೀಕರಿಸಿದರು.

ನಾಮಪತ್ರ ಮತ್ತು ಸಂಬಂಧಪಟ್ಟ ದಾಖಲಾತಿಗಳು ಕ್ರಮಬದ್ಧವಾಗಿದ್ದು ನಿರ್ವಚನಾಧಿಕಾರಿ ಹಾಗೂ ರಾಜ್ಯಸಭೆಯ ಸೆಕ್ರೆಟರಿ ಜನರಲ್ ಕೂಡಾ ಆಗಿರುವ ವಿ.ಕೆ. ಅಗ್ನಿಹೋತ್ರಿ ಅವರಿಂದ ಅಂಗೀಕೃತವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಸೂಚಕರು ಮತ್ತು ಅನುಮೋದಕರ ಪಟ್ಟಿಯಲ್ಲಿನ ನ್ಯೂನತೆಗಳಂತಹ ಕೆಲವು ಆಕ್ಷೇಪಗಳನ್ನು ಸಂಗ್ಮಾ ವಿರುದ್ಧ ಕೆಲವು ವ್ಯಕ್ತಿಗಳು ವ್ಯಕ್ತ ಪಡಿಸಿದರು. ಆದರೆ ನಿರ್ವಚನಾಧಿಕಾರಿಗಳು ಅದನ್ನು ತಿರಸ್ಕರಿಸಿದರು ಎಂದು ಅಧಿಕಾರಿಗಳು ಹೇಳಿದರು.

ಜುಲೈ 19ರಂದು ನಡೆಯುವ ಚುನಾವಣೆಗಾಗಿ ನಾಮಪತ್ರ ಪರಿಶೀಲನೆ ಸೋಮವಾರ ಮುಕ್ತಾಯವಾಗ ಬೇಕಾಗಿತ್ತು. ಆದರೆ ಸಂಗ್ಮಾ ವಿರುದ್ಧ ಹಾಗೂ ಯುಪಿಎ ರಾಷ್ಟ್ರಪತಿ ಅಭ್ಯರ್ಥಿ ಪ್ರಣವ್ ಮುಖರ್ಜಿ ವಿರುದ್ಧ ಆಕ್ಷೇಪಗಳು ಬಂದ ಕಾರಣ ನಿರ್ವಚನಾಧಿಕಾರಿಗಳು ಈ ಎರಡು ಪ್ರಕರಣಗಳನ್ನು ಈದಿನದವರೆಗೆ ಮುಂದೂಡಿದ್ದರು.

ಲಾಭದ ಹುದ್ದೆ ನಿಯಮಗಳ ಅಡಿಯಲ್ಲಿ ಉಲ್ಲಂಘನೆಯಾಗಿರುವುದಾಗಿ ಪ್ರತಿಪಾದಿಸಿ ಮುಖರ್ಜಿ ಅವರ ಅಭ್ಯರ್ಥನ ರದ್ದಿಗೆ ಸಂಗ್ಮಾ ಪ್ರಯತ್ನಿಸಿದ್ದರು. ಪ್ರಣವ್ ಅವರು ಭಾರತೀಯ ಅಂಕಿ-ಸಂಖ್ಯಾ ಸಂಸ್ಥೆಯ ಅಧ್ಯಕ್ಷರಾಗಿದ್ದು ಲಾಭದ ಹುದ್ದೆ ಹೊಂದಿದ್ದಾರೆ, ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ಸಂಗ್ಮಾ ಆಗ್ರಹಿಸಿದ್ದರು.

 ದೂರಿಗೆ ಉತ್ತರ ನೀಡಲು ಮುಖರ್ಜಿ ಅವರಿಗೆ ಕಾಲಾವಕಾಶ ನೀಡಲಾಗಿದ್ದು ಈದಿನ ತಡವಾಗಿ ಈ ಪ್ರಕರಣದ ವಿಚಾರಣೆ ನಡೆಯುವ ನಿರೀಕ್ಷೆ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.