ADVERTISEMENT

ರಾಷ್ಟ್ರಪತಿ ಭವನಕ್ಕೆ ನುಗ್ಗಲು ಹಕ್ಕಿಲ್ಲ

ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಕಿಡಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 4:44 IST
Last Updated 25 ಡಿಸೆಂಬರ್ 2012, 4:44 IST

ನವದೆಹಲಿ:`ಅತ್ಯಾಚಾರ ಪ್ರಕರಣದ ವಿರುದ್ಧ ಬೀದಿಗಿಳಿದಿರುವ ಚಳವಳಿಗಾರರು ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಯಾರ ಅಭ್ಯಂತರವೂ ಇಲ್ಲ. ಆದರೆ, ವಿಜಯ ಚೌಕದಲ್ಲಿ ಜಮಾವಣೆಗೊಂಡು ಪೊಲೀಸರ ಅಡ್ಡಗಟ್ಟೆಗಳನ್ನು ಮುರಿದು ರಾಷ್ಟ್ರಪತಿ ಭವನದತ್ತ ನುಗ್ಗುವುದಕ್ಕೆ ಅವರಿಗೆ ಹಕ್ಕಿಲ್ಲ. ಸರ್ಕಾರ ಇಂಥ ವರ್ತನೆಯನ್ನು ಸಹಿಸುವುದಿಲ್ಲ' ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಸೋಮವಾರ ಹೇಳಿದ್ದಾರೆ.

`ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ವಿರೋಧಿಸಿ ಪ್ರತಿಭಟನೆ ಆರಂಭವಾದ ದಿನದಿಂದಲೂ ಚಳವಳಿಗಾರರ ಪ್ರತಿನಿಧಿಗಳನ್ನು ಭೇಟಿ ಮಾಡುತ್ತಿದ್ದೇನೆ. ಶಾಂತಿಯುತ ಪ್ರತಿಭಟನೆ ಪ್ರತಿಯೊಬ್ಬರ ಹಕ್ಕು. ಆದರೆ, ಪ್ರತಿಭಟನೆಯಲ್ಲಿ ಕೆಲವು ಸಮಾಜಘಾತುಕ ಶಕ್ತಿಗಳು ಸೇರಿಕೊಂಡಿವೆ' ಎಂದು ಗೃಹ ಸಚಿವರು ಆರೋಪಿಸಿದ್ದಾರೆ.

`ಭಾನುವಾರದ ಹಿಂಸಾಚಾರದಲ್ಲಿ 18 ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಸಾವಿರಾರು ಜನರ ನಡುವೆ ದುಷ್ಕರ್ಮಿಗಳು ಸೇರಿಕೊಂಡರೆ ಪತ್ತೆ ಹಚ್ಚುವುದು ಹೇಗೆ?' ಎಂದು ಶಿಂಧೆ ಕೇಳಿದ್ದಾರೆ.

`ಪ್ರತಿಭಟನಾಕಾರರ ಭೇಟಿಗೆ ಇಂಡಿಯಾ ಗೇಟ್‌ಗೆ ಏಕೆ ಹೋಗಲಿಲ್ಲ' ಎಂಬ ಪ್ರಶ್ನೆಗೆ ಶಿಂಧೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. `ಪ್ರತಿಯೊಬ್ಬರು ಪ್ರತಿಭಟನೆ ಮಾಡಿದಾಗಲೂ ಗೃಹ ಸಚಿವರು ಹೋಗಲಾದೀತೇ? ನಾಳೆ ಕಾಂಗ್ರೆಸ್ ಪ್ರತಿಭಟನೆ ನಡೆಯಲಿದೆ. ಬಿಜೆಪಿ ಚಳವಳಿ ಮಾಡಲಿದೆ. ಮತ್ತೊಂದು ದಿನ ಮಾವೋವಾದಿಗಳು ಶಸ್ತ್ರಾಸ್ತ್ರ ಹಿಡಿದು ಬರುತ್ತಾರೆ. ಅವರ ಭೇಟಿಗೆ ಸರ್ಕಾರ ಹೋಗಲು ಸಾಧ್ಯವೇ?' ಎಂದು ಗುಡುಗಿದ್ದಾರೆ. `ನೀವು (ಪತ್ರಕರ್ತರು) ಸರ್ಕಾರದ ಸ್ಥಿತಿ ಅರ್ಥಮಾಡಿಕೊಳ್ಳಬೇಕು' ಎಂದಿದ್ದಾರೆ.

ದೆಹಲಿ ಪೊಲೀಸ್ ಕಮಿಷನರ್ ನೀರಜ್ ಕುಮಾರ್ ಅವರನ್ನು ಸೇವೆಯಿಂದ ವಜಾ ಮಾಡುವ ಕುರಿತು ಶಿಂಧೆ ನಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಪರಿಸ್ಥಿತಿ ತಿಳಿಗೊಂಡ ಬಳಿಕ ಎಲ್ಲ ಅಂಶ ಕುರಿತು ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ.

ಸಿಸಿ ಟಿವಿ ಕ್ಯಾಮೆರಾ ನೆರವಿನಿಂದ ಅತ್ಯಾಚಾರಿಗಳನ್ನು ಬಂಧಿಸಲಾಗಿದೆ. ತ್ವರಿತ ಗತಿಯಲ್ಲಿ ದಿನನಿತ್ಯದ ಆಧಾರದ ಮೇಲೆ ಪ್ರಕರಣದ ವಿಚಾರಣೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸುವುದಾಗಿ ಗೃಹ ಸಚಿವರು ಭರವಸೆ ನೀಡಿದ್ದಾರೆ.

ಜ.4ರಂದು ಮುಖ್ಯ ಕಾರ್ಯದರ್ಶಿಗಳ ಸಭೆ
ರಾಜ್ಯಗಳಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣಗಳು ಹಾಗೂ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಲು ಜನವರಿ 4ರಂದು ಎಲ್ಲ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮಹಾನಿರ್ದೇಶಕರ ಸಭೆ ಕರೆದಿರುವುದಾಗಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.