ADVERTISEMENT

ರಾಷ್ಟ್ರೀಯ ಸಂಕ್ಷಿಪ್ತ ಸುದ್ದಿಗಳು

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2012, 19:59 IST
Last Updated 18 ಡಿಸೆಂಬರ್ 2012, 19:59 IST

ಕೇರಳ: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ

ತಿರುವನಂತಪುರ (ಐಎಎನ್‌ಎಸ್):  ದೆಹಲಿಯ ಬಸ್‌ವೊಂದರಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಸಿಹಸಿಯಾಗಿರುವಾಗಲೇ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಕೇರಳದಲ್ಲಿ ಮೂರು ಪ್ರಕರಣಗಳು ಬೆಳಕಿಗೆ ಬಂದಿವೆ.

ತ್ರಿಶ್ಶೂರ್‌ನಲ್ಲಿ ನಡೆದಿರುವ ಘಟನೆಯಲ್ಲಿ 10 ವರ್ಷದ ಬಾಲಕಿ ತನ್ನ ತಂದೆಯ ಕಾಮತೃಷೆಗೆ ಒಳಗಾಗಿದ್ದಾಳೆ. ಘಟನೆ ಸಂಬಂಧ ಕಾಮಾಂಧ ತಂದೆಯನ್ನು ಬಂಧಿಸಲಾಗಿದೆ.

ಮತ್ತೊಂದು ಘಟನೆ ಕೊಲ್ಲಂನಲ್ಲಿ ನಡೆದಿದ್ದು, 13 ವರ್ಷದ ತನ್ನ ನಾದಿನಿಯ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ 49 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

ಮಲಪ್ಪುರಂ ಜಿಲ್ಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಗೆ ಪಕ್ಕದ ಮನೆಯವನು ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದ್ದು, ಆರೋಪಿ ನಾಪತ್ತೆಯಾಗಿದ್ದಾನೆ.

ಅತ್ಯಾಚಾರ: ಮೂವರಿಗೆ 10 ವರ್ಷ ಜೈಲು
ನವದೆಹಲಿ (ಪಿಟಿಐ): 
ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೂವರಿಗೆ ದೆಹಲಿ ನ್ಯಾಯಾಲಯ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ವಿಜಯ್, ವಿನಯ್ ಕುಮಾರ್ ಮತ್ತು ಅನಿಲ್ ಶಿಕ್ಷೆಗೊಳಗಾದವರು. ದೆಹಲಿಯ ಅಡಿಷನಲ್ ಸೆಷನ್ಸ್ ನ್ಯಾಯಾಧೀಶ ವೀರೇಂದ್ರ ಕುಮಾರ್ ಗೋಯಲ್ ಅವರು, ಆರೋಪಿಗಳಿಗೆ ಹತ್ತು ವರ್ಷ ಜೈಲು ಶಿಕ್ಷೆ ಮತ್ತು ತಲಾ 50 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಬಸ್‌ನಿಂದ ಮಗು ಹೊರಗೆಸೆದ ತಂದೆ!
ನಾಸಿಕ್ (ಪಿಟಿಐ):
`ಅಪ್ಪ- ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು' ಎಂಬ ಮಾತಿನಂತೆ ಚಲಿಸುತ್ತಿದ್ದ ಬಸ್‌ನಲ್ಲಿ ಪತಿ- ಪತ್ನಿಯ ನಡುವೆ ಉಂಟಾದ ಜಗಳ, ಅಂತಿಮವಾಗಿ ಕೋಪೋದ್ರಿಕ್ತ ಪತಿ ತನ್ನ ಎರಡು ವರ್ಷದ ಹೆಣ್ಣು ಮಗುವನ್ನೇ ಬಸ್‌ನಿಂದ ಹೊರಗೆಸೆದ ಘಟನೆಯೊಂದಿಗೆ ಅಂತ್ಯ ಕಂಡಿದೆ.
ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ.

ಮಾಲೆಗಾಂವ್ ನಿವಾಸಿ ಅಬ್ದುಲ್ ರಹೀಮ್ ಅನ್ಸಾರಿ ಪತ್ನಿ ಫರ್ಜಾನಾ ಮತ್ತು ಮಗು ಆಯೇಷಾಳೊಂದಿಗೆ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಬಸ್‌ನಲ್ಲಿ ಮುಂಬೈನಿಂದ ಆಗ್ರಾಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಇಬ್ಬರ ನಡುವೆ ಜಗಳ ಸಂಭವಿಸಿದೆ. ಆಗ ಸಿಟ್ಟಿಗೆದ್ದ ರಹೀಮ್ ಹೆದ್ದಾರಿಯ ಧೂಲೆ ಎಂಬಲ್ಲಿನ ಹೋಟೆಲ್‌ವೊಂದರ ಬಳಿ ಮಗುವನ್ನು ಹೊರಗೆಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಐವರು ಲಷ್ಕರ್ ಕಮಾಂಡರ್‌ಗಳ ಹತ್ಯೆ
ಶ್ರೀನಗರ:
ಲಷ್ಕರ್-ಎ-ತೈಯಬಾ (ಎಲ್‌ಇಟಿ) ಸಂಘಟನೆಯ ಬಲ ಕುಗ್ಗಿಸುವಂತೆ ಈ ಸಂಘಟನೆಯ ಐವರು ಕಮಾಂಡರ್‌ಗಳನ್ನು ಭದ್ರತಾ ಪಡೆ ಸಿಬ್ಬಂದಿ ಉತ್ತರ ಕಾಶ್ಮೀರದ ಸೋಪೂರ್ ಪಟ್ಟಣದಲ್ಲಿ ಮಂಗಳವಾರ ಗುಂಡಿಟ್ಟು ಕೊಂದಿದ್ದಾರೆ.

ಸತ್ತ ಐದು ಉಗ್ರರ ಪೈಕಿ ಕಾಶ್ಮೀರದಲ್ಲಿ `ಎಲ್‌ಇಟಿ' ಕಾರ್ಯಾಚರಣೆಗಳ ನೇತೃತ್ವ ವಹಿಸಿದ್ದ ಫಹದುಲ್ಲಾ ಸೇರಿದ್ದಾನೆ ಎನ್ನಲಾಗಿದೆ.
ರಾತ್ರಿಯಾದ ಕಾರಣ ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಫಹದುಲ್ಲಾ ಸೇರಿದಂತೆ ಈವರೆಗೆ ಐದು ಭಯೋತ್ಪಾದಕರನ್ನು ಸಾಯಿಸಲಾಗಿದೆ ಎಂದು ಸೋಪೂರ್‌ನ ಪೊಲೀಸ್ ವರಿಷ್ಠಾಧಿಕಾರಿ ಇಮ್ತಿಯಾಜ್ ಹುಸೇನ್ ತಿಳಿಸಿದ್ದಾರೆ.

ಕಂದಕಕ್ಕೆ ಮಿನಿಬಸ್: 10 ಸಾವು
ಜಮ್ಮು (ಐಎಎನ್‌ಎಸ್)
: ಬೆಟ್ಟ ಪ್ರದೇಶಗಳ ನಡುವಿನ ಕಿರಿದಾದ ರಸ್ತೆಯಲ್ಲಿ ಚಲಿಸುತ್ತಿದ್ದ ಮಿನಿ ಬಸ್ಸೊಂದು ಕಂದಕಕ್ಕೆ ಬ್ದ್ದಿದ ಪರಿಣಾಮ 10 ಮಂದಿ ಸತ್ತು, 6 ಮಂದಿ ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ರಿಹಾಸಿ ಜಿಲ್ಲೆಯಲ್ಲಿ ನಡೆದಿದೆ.

ಮಹೋರ್‌ನಿಂದ ಜಮ್ಮುಗೆ ತೆರಳುತ್ತಿದ್ದ ಮಿನಿಬಸ್ ಮಲಾಯ್ ನಲ್ಲಾಹ್ ಬಳಿ ನಿಯಂತ್ರಣ ತಪ್ಪಿ 500 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಘಟನೆ ವೇಳೆ ಬಸ್‌ನಲ್ಲಿ 16 ಮಂದಿ ಪ್ರಯಾಣಿಕರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.