ನವದೆಹಲಿ (ಪಿಟಿಐ): ಮುಂಬರುವ ಲೋಕಸಭೆ ಚುನಾವಣೆಯ ಪೂರ್ವ ತಯಾರಿಗೆ ಕಾಂಗ್ರೆಸ್ ಜನವರಿ 17ರಂದು ನವದೆಹಲಿಯಲ್ಲಿ ಎಐಸಿಸಿ ಸಭೆ ಕರೆದಿದ್ದು, ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಅವರ ಹೆಸರು ಘೋಷಿಸುವ ಸಾಧ್ಯತೆ ಇದೆ.
ಎಐಸಿಸಿ ಸಭೆಯಲ್ಲಿ ದೇಶದಾದ್ಯಂತ ಇರುವ ಪಕ್ಷದ ಸಾವಿರಾರು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘ಎಐಸಿಸಿ ಸಭೆಯನ್ನು ಇಡೀ ಪಕ್ಷವೇ ಎದುರು ನೋಡುತ್ತಿದೆ. ಪ್ರಧಾನಿ ಅಭ್ಯರ್ಥಿ ಹೆಸರು ಘೋಷಣೆಯಾಗಲಿರುವುದರಿಂದ ಈ ಬಗ್ಗೆ ತೀವ್ರ ಉತ್ಸುಕರಾಗಿದ್ದೇವೆ’ ಎಂದು ದ್ವಿವೇದಿ ಅವರು ಸುದ್ದಿಗೋಷ್ಠಿ ನಡೆಸಿದ ಕೆಲ ಗಂಟೆಗಳ ಬಳಿಕ ಕಾಂಗ್ರೆಸ್ ವಕ್ತಾರೆ ಮತ್ತು ಎಐಸಿಸಿ ಮಾಧ್ಯಮ ಕಾರ್ಯದರ್ಶಿ ಪ್ರಿಯಾ ದತ್ ಅವರು ಮಾಧ್ಯಮದವರಿಗೆ ತಿಳಿಸಿದರು.
‘ರಾಹುಲ್ ಗಾಂಧಿ ಅವರನ್ನು ಬಿಂಬಿಸುತ್ತಿರುವುದಕ್ಕೆ ನಾವು ಅವರಿಗೆ ಶುಭ ಕೋರುತ್ತೇವೆ. ಭವಿಷ್ಯದಲ್ಲಿ ಅವರು ಪಕ್ಷವನ್ನು ಮುನ್ನಡೆಸಿಕೊಂಡು ಹೋಗುತ್ತಾರೆ. ಈ ಕುರಿತು ಪಕ್ಷದಲ್ಲಿ ಒಮ್ಮತ ಮೂಡಿದೆ. ಈ ಬಗ್ಗೆ ಹೆಚ್ಚಿನ ವಿವರಣೆ ನೀಡುವ ಅಗತ್ಯವಿಲ್ಲ ಅಂದುಕೊಂಡಿದ್ದೇನೆ. ನಾಯಕತ್ವದ ಬಗ್ಗೆ ಪಕ್ಷದಲ್ಲಿ ಒಮ್ಮತ ಮೂಡಿರುವ ವಿಚಾರವನ್ನು ಈ ಮೊದಲು ಕೂಡ ತಿಳಿಸಲಾಗಿತ್ತು’ ಎಂದು ಪ್ರಶ್ನೆಯೊಂದಕ್ಕೆ ದತ್ ಉತ್ತರಿಸಿದರು.
ಕಾಂಗ್ರೆಸ್ ಎದುರಿಸುತ್ತಿರುವ ಸರ್ವರೋಗಕ್ಕೂ ರಾಹುಲ್ ಗಾಂಧಿ ಅವರು ದಿವ್ಯ ಔಷಧಿ ಆಗುವರೇ ಎಂಬ ಪ್ರಶ್ನೆಗೆ, ‘ಯಾವುದನ್ನು ಕೂಡ ಪರಿಹಾರ ಎಂಬುದಾಗಿ ಪರಿಗಣಿಸಿಲ್ಲ. ಕಾಂಗ್ರೆಸ್ ಎಂದೂ ಕೂಡ ಪ್ರಧಾನಿ ಅಥವಾ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಮುಂಚಿತವಾಗಿ ಘೋಷಿಸಿಲ್ಲ. ಆದರೆ, ಈ ಕುರಿತು ಜನ ಬಯಕೆ ಹೊಂದಿದ್ದಾರೆ ಎನ್ನುವುದನ್ನು ನಾವೆಲ್ಲರೂ ಮನಗಂಡಿದ್ದೇವೆ’ ಎಂದು ಹೇಳಿದರು.
ಜನವರಿಯಲ್ಲಿ ಜೈಪುರದಲ್ಲಿ ನಡೆದಿದ್ದ ಎಐಸಿಸಿ ಸಭೆ ಮತ್ತು ಚಿಂತನ ಶಿಬಿರದ ಬಳಿಕ ಎಐಸಿಸಿ ಮತ್ತೆ ಸಭೆ ಸೇರಿರಲಿಲ್ಲ. ಆ ಸಭೆಯಲ್ಲೇ ರಾಹುಲ್ ಗಾಂಧಿ ಅವರನ್ನು ಪಕ್ಷದ ಉಪಾಧ್ಯಕ್ಷರಾಗಿ ಘೋಷಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.