ADVERTISEMENT

ರಾಹುಲ್ ಗಾಂಧಿಗೆ ಮೂಳೆ ಮುರಿತ, ಪೂರ್ಣ ವಿಶ್ರಾಂತಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2011, 11:00 IST
Last Updated 1 ಮಾರ್ಚ್ 2011, 11:00 IST

ನವದೆಹಲಿ (ಪಿಟಿಐ): ರಾಹುಲ್ ಗಾಂಧಿ ಅವರ ಬಲಗಾಲಿನಲ್ಲಿ ಮೂಳೆ ಮುರಿತ ಉಂಟಾಗಿದ್ದು, ಪರಿಣಾಮವಾಗಿ ಸೋಮವಾರ 2011-12ರ ಮುಂಗಡಪತ್ರ ಮಂಡನೆ ಕಾಲದಲ್ಲಿ ಸದನದಲ್ಲಿ ಹಾಜರಿರಲು ಅವರಿಗೆ ಸಾಧ್ಯವಾಗಿರಲಿಲ್ಲ ಎಂಬುದು ಮಂಗಳವಾರ ಬೆಳಕಿಗೆ ಬಂದಿದೆ.

ರಾಹುಲ್ ಗಾಂಧಿ ಅವರಿಗೆ ಸುಧಾರಿಸಿಕೊಳ್ಳಲು ಕೆಲಕಾಲ ಬೇಕಾಗಬಹುದು ಎನ್ನಲಾಗಿದ್ದು ವೈದ್ಯರು ಅವರಿಗೆ ಸಂಫೂರ್ಣ ವಿಶ್ರಾಂತಿ ಪಡೆಯುವಂತೆ ಸಲಹೆ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.

ಏಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾಹುಲ್ ಅವರು ಸೋಮವಾರ ಮುಂಗಡಪತ್ರ ಮಂಡನೆ ಕಾಲದಲ್ಲಿ ಗೈರು ಹಾಜರಾಗಿದ್ದುದು ಎಲ್ಲರ ಗಮನ ಸೆಳೆದಿತ್ತು. ಸಂಸತ್ತಿನ ಯಾವುದೇ ಪ್ರಮುಖ ಕಲಾಪದಲ್ಲೂ ತಪ್ಪದೇ ಹಾಜರಾಗುವ ಪರಿಪಾಠವನ್ನು ಅವರು ಬೆಳೆಸಿಕೊಂಡಿದ್ದರು.

ರಾಹುಲ್ ಅವರು ಶುಕ್ರವಾರ ನಡೆಯುವಾಗ ಸಮಸ್ಯೆ ಕಾಣಿಸಿಕೊಂಡಿದ್ದರೂ, ರೈಲ್ವೆ ಮುಂಗಡಪತ್ರ ಮಂಡನೆ ವೇಳೆ ಸಂಸತ್ ಕಲಾಪದಲ್ಲಿ ಪಾಲ್ಗೊಂಡಿದ್ದರು.

ಕಲಾಪದ ಬಳಿಕ ಅವರು ಎಕ್ಸ್ ರೇ ಪರೀಕ್ಷೆಗೆ ಒಳಗಾಗಿದ್ದರು. ಎಕ್ಸ್ ರೇ ಪರೀಕ್ಷೆಯಲ್ಲಿ ಅವರ ಬಲಗಾಲಿನಲ್ಲಿ ಮೂಳೆ ಮುರಿತ ಉಂಟಾದುದು ಬೆಳಕಿಗೆ ಬಂದಿತ್ತು.

ಕೆಲವು ದಿನಗಳ ಹಿಂದೆ ವ್ಯಾಯಾಮ ನಿರತರಾಗಿದ್ದಾಗ ಅವರು ಗಾಯಗೊಂಡಿದ್ದರು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.