ADVERTISEMENT

ರೂ 25 ಲಕ್ಷ ಠೇವಣಿ: ಚಂದ್ರಸ್ವಾಮಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2011, 19:30 IST
Last Updated 15 ಜೂನ್ 2011, 19:30 IST

ನವದೆಹಲಿ (ಪಿಟಿಐ): ಫೆಮಾ ಕಾಯ್ದೆ ಉಲ್ಲಂಘನೆ ಕುರಿತಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಸ್ವಯಂ ಘೋಷಿತ ದೇವಮಾನವ ಚಂದ್ರಸ್ವಾಮಿ ಮತ್ತು ಆತನ ನಿಕಟವರ್ತಿ ವಿಕ್ರಂ ಸಿಂಗ್‌ಗೆ ದಂಡದ ಮೊದಲ ಕಂತಾಗಿ 25 ಲಕ್ಷ ರೂಪಾಯಿಗಳನ್ನು ಠೇವಣಿ ಇರಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ನ್ಯಾಯಮೂರ್ತಿಗಳಾದ ಬಿ.ಎಸ್. ಚೌಹಾಣ್ ಮತ್ತು ಸ್ವತಂತ್ರ ಕುಮಾರ್ ಅವರನ್ನು ಒಳಗೊಂಡ ರಜಾ ಕಾಲದ ಪೀಠವು ಈ ಠೇವಣಿಯನ್ನು ಒಂದು ವಾರದೊಳಗೆ  ಸಲ್ಲಿಸುವಂತೆ ಆರೋಪಿಗಳಿಗೆ ಬುಧವಾರ ನಿರ್ದೇಶನ ನೀಡಿದೆ.

ಜಾರಿ ನಿರ್ದೇಶನಾಲಯವು (ಇ.ಡಿ) ಚಂದ್ರಸ್ವಾಮಿ ಮತ್ತು ಆತನ ನಿಕಟವರ್ತಿ ವಿಕ್ರಂ ಸಿಂಗ್ ವಿರುದ್ಧ ಹಲವು ಪ್ರಕರಣ ದಾಖಲಿಸಿಕೊಂಡು ಕೋಟಿಗಟ್ಟಲೆ ದಂಡ ವಿಧಿಸಿತ್ತು. ಇವುಗಳಲ್ಲಿ ನಾಲ್ಕು ಪ್ರಕರಣಗಳಿಗೆ ರೂ. 25 ಲಕ್ಷ ಠೇವಣಿ ಇರಿಸಲು ಪೀಠ ಸೂಚಿಸಿದೆ.

`ನೀವು (ಆರೋಪಿಗಳು) ಎಂಟು ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ದಂಡವನ್ನು ತೆರಬೇಕಿದೆ. ಎಂದು ಪೀಠ ಹೇಳಿದಾಗ, ಇದಕ್ಕೆ ಉತ್ತರಿಸಿದ ಆರೋಪಿ ಪರ ವಕೀಲರು `ಅಷ್ಟೊಂದು ದೊಡ್ಡ ಮೊತ್ತ ಒಂದೇ ಸಲ ಭರಿಸುವುದು ಅಸಾಧ್ಯ~ ಎಂದರು.

ಆಗ ಪೀಠವು ಮೊದಲ ಕಂತಿನಲ್ಲಿ ರೂ 25 ಲಕ್ಷಗಳನ್ನು ಭರಿಸುವಂತೆ ಸೂಚಿಸಿ, ವಿಚಾರಣೆಯನ್ನು ಜುಲೈ ಎರಡನೇ ವಾರಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.