ADVERTISEMENT

ರೂ. 5 ಲಕ್ಷ ವೇತನಕ್ಕೆ ರಿಟರ್ನ್ಸ್ ಬೇಡ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 18:30 IST
Last Updated 28 ಫೆಬ್ರುವರಿ 2011, 18:30 IST

ನವದೆಹಲಿ (ಪಿಟಿಐ): ಐದು ಲಕ್ಷ ರೂಪಾಯಿವರೆಗೆ ವೇತನ ಪಡೆಯುವ ಉದ್ಯೋಗಿಗಳು ಮುಂದಿನ ಹಣಕಾಸು ವರ್ಷದಿಂದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಅಗತ್ಯ ಇಲ್ಲ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿಯ (ಸಿಬಿಡಿಟಿ) ಅಧ್ಯಕ್ಷ ಸುಧೀರ್ ಚಂದ್ರ ಹೇಳಿದ್ದಾರೆ.

ಇಲ್ಲಿ ಸೋಮವಾರ ಬಜೆಟ್ ಮಂಡನೆ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2011-12ನೇ ಅಸೆಸ್‌ಮೆಂಟ್ ವರ್ಷದಿಂದಲೇ ಈ ವಿನಾಯಿತಿ ಜಾರಿಗೆ ಬರಲಿದೆ ಎಂದರು.

ಒಂದು ವೇಳೆ ಉದ್ಯೋಗಿಗಳಿಗೆ ಲಾಭಾಂಶ, ಬಡ್ಡಿಯಂತಹ ಇತರ ಆದಾಯ ಮೂಲಗಳು ಇದ್ದರೆ ಹಾಗೂ ಅವರು ರಿಟರ್ನ್ಸ್ ಸಲ್ಲಿಸದಿದ್ದರೆ ಅವರು ತಮ್ಮ ಉದ್ಯೋಗದಾತರಿಂದಲೇ ತೆರಿಗೆ ಕಡಿತ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

ಸರ್ಕಾರ ಈ ನಿಟ್ಟಿನಲ್ಲಿ ಯೋಜನೆಯೊಂದನ್ನು ರೂಪಿಸುತ್ತಿದ್ದು, ಶೀಘ್ರವೇ ಅಧಿಸೂಚನೆ ಹೊರಡಿಸಲಿದೆ ಎಂದರು.
ಉದ್ಯೋಗಿಗಳಿಗೆ ನೀಡುವ ಫಾರಂ ನಂ.16 ಅನ್ನು ಆದಾಯ ತೆರಿಗೆ ರಿಟರ್ನ್ ಎಂದೇ ಪರಿಗಣಿಸಲಾಗುವುದು ಎಂದು ಹೇಳಿದರು.

ತೆರಿಗೆ ವಿನಾಯಿತಿ ಮಿತಿಗಿಂತ ಅಧಿಕ ಆದಾಯ ಇರುವ ಪ್ರತಿಯೊಬ್ಬರೂ ರಿಟರ್ನ್ಸ್ ಸಲ್ಲಿಸುವುದು ಕಡ್ಡಾಯವಾಗಿತ್ತು. ಇದು ಸಣ್ಣ ಪ್ರಮಾಣದಲ್ಲಿ ತೆರಿಗೆ ಪಾವತಿಸುವವರಿಗೆ ದೊಡ್ಡ ಹೊರೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.