ADVERTISEMENT

ರೆಡ್ಡಿಗಳ ವಿರುದ್ಧ ಮೊಕದ್ದಮೆ?

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 19:30 IST
Last Updated 17 ಸೆಪ್ಟೆಂಬರ್ 2011, 19:30 IST

ಹೈದರಾಬಾದ್: ರೆಡ್ಡಿಗಳು ಅಕ್ರಮ ಗಣಿಗಾರಿಕೆಯಿಂದ ಗಳಿಸಿದ ಸಂಪತ್ತನ್ನು ಬಳ್ಳಾರಿ, ಡಿ.ಹಿರೇಹಾಳ ಹಾಗೂ ಅನಂತಪುರದ ಬ್ಯಾಂಕ್ ಲಾಕರ್‌ಗಳಲ್ಲಿ ಬಚ್ಚಿಟ್ಟಿರುವ ಬಗ್ಗೆ ಸಿಬಿಐ ತಪಾಸಣೆ ಮಾಡುತ್ತಿರುವ ಬೆನ್ನಲ್ಲೇ, ಜಾರಿ ನಿರ್ದೇಶನಾಲಯ(ಇ.ಡಿ.)ವು ಈ ಸಂಪತ್ತಿನ ಪರಿವರ್ತನೆಗೆ (ಕಪ್ಪು ಹಣ ಬಿಳಿ ಮಾಡಿದ್ದು) ಸಂಬಂಧಿಸಿದಂತೆ ಮೊಕದ್ದಮೆಯೊಂದನ್ನು ದಾಖಲಿಸುವ ಸಿದ್ಧತೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿಯ ರೆಡ್ಡಿ ಸಹೋದರರ ಆಸ್ತಿ ಮುಟ್ಟುಗೋಲು ಮಾಡಿಕೊಳ್ಳುವ ಸಾಧ್ಯತೆಗಳಿವೆ.

ರೆಡ್ಡಿ ಸೋದರರು ಕಾನೂನು ಉಲ್ಲಂಘಿಸಿ, ಬೇನಾಮಿ ಕಂಪೆನಿಗಳನ್ನು ಸೃಷ್ಟಿಸಿ, ಸುಳ್ಳು ಬ್ಯಾಂಕ್ ಖಾತೆಗಳನ್ನು ತೆರೆದು, ತಮ್ಮ ಗುಂಪಿನ ಕಂಪೆನಿಗಳ ವಾರ್ಷಿಕ ಲೆಕ್ಕಪತ್ರಗಳನ್ನು ಹಿಗ್ಗಿಸಿ, ಲೇವಾದೇವಿ ವ್ಯವಹಾರ ಮಾಡಿರುವ ಅಂಶ ಸಿಬಿಐ ತನಿಖೆಯಿಂದ ಪತ್ತೆಯಾಗಿದೆ.

ಇಂತಹ ವಿಲಕ್ಷಣ ನಡವಳಿಕೆಯ ಸಾಕ್ಷ್ಯಗಳನ್ನು ಮೊದಲಿಗೆ ಕಳೆದ ವರ್ಷದ ಆಗಸ್ಟ್‌ನಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಗುರುತಿಸಲಾಗಿದೆ.

ಇಂಡೊನೇಷ್ಯಾ ಮತ್ತು ಸಿಂಗಪುರದಲ್ಲಿನ ಕೆಲವು ಕಂಪೆನಿಗಳೊಡನೆ ರೆಡ್ಡಿ ಸೋದರರು ಸಂಪರ್ಕ ಹೊಂದಿರುವ ಬಗ್ಗೆಯೂ ಇಲಾಖೆ ಸಾಕಷ್ಟು ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದೆ. ಇದಲ್ಲದೆ, ಜನಾರ್ದನ ರೆಡ್ಡಿ ಬಹಾಮಾ ಮತ್ತು ಮಾರಿಷಸ್ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಬೋಗಸ್ ಕಂಪೆನಿಗಳನ್ನು ಸೃಷ್ಟಿಸಿರುವ ಬಗ್ಗೆಯೂ ಇಲಾಖೆ ಶಂಕೆ ವ್ಯಕ್ತಪಡಿಸಿದೆ.

ಜನಾರ್ದನ ರೆಡ್ಡಿ ಪತ್ನಿ ಗಾಲಿ ಲಕ್ಷ್ಮಿ ಅರುಣಾ ಅವರು ಆರಂಭಿಸಿರುವ ಕಂಪೆನಿಯೊಂದರಿಂದ ವಿದೇಶಿ ವಿನಿಮಯ ಆಡಳಿತ ಕಾಯ್ದೆ (ಫೆಮಾ) ಉಲ್ಲಂಘನೆ ಆಗಿರುವ ಮಾಹಿತಿಯನ್ನು ಸಿಬಿಐ ಈಗಾಗಲೇ ಇ.ಡಿ.ಗೆ ಒದಗಿಸಿದೆ. ಈ ನಿಟ್ಟಿನಲ್ಲಿ ಮುಂದಿನ ತನಿಖೆ ನಡೆಸಲು ಇ.ಡಿ. ಸಜ್ಜಾಗಿದೆ.

ಜಾರಿ ನಿರ್ದೇಶನಾಲಯವು ರೆಡ್ಡಿ ಸೋದರರು ಮತ್ತು ಅವರ ಬಾವ ಬಿ.ವಿ. ಶ್ರೀನಿವಾಸರೆಡ್ಡಿ ವಿರುದ್ಧ ಮೊಕದ್ದಮೆ ದಾಖಲಿಸುವ ಬಗ್ಗೆ ತುಟಿ ಬಿಚ್ಚದಿದ್ದರೂ, ಸಿಬಿಐ ಜೊತೆ ಹಣಕಾಸು ಅವ್ಯಹಾರದ ಕುರಿತು ಹಲವಾರು ಸುತ್ತಿನ ಮಾತುಕತೆ ನಡೆಸಿದೆ. ಈ ಸಂದರ್ಭದಲ್ಲಿ ರೆಡ್ಡಿ ಮತ್ತು ಕಂಪೆನಿಗಳ ವಿರುದ್ಧ ಲೇವಾದೇವಿ ವ್ಯವಹಾರ ಆರೋಪದಡಿ ಮೊಕದ್ದಮೆ ದಾಖಲಿಸಲು ಮಾಹಿತಿ ಸಂಗ್ರಹಿಸಿದೆ.

ಈಗಾಗಲೇ ದೆಹಲಿಯಲ್ಲಿನ ತನ್ನ ಪ್ರಧಾನ ಕಚೇರಿಗೆ ಸ್ಥಳೀಯ ಇ.ಡಿ. ಉಪನಿರ್ದೇಶಕರ ಕಚೇರಿ ಪ್ರಾಥಮಿಕ ಮಾಹಿತಿಗಳನ್ನು ಸಲ್ಲಿಸಿರುವುದಾಗಿ ಹೇಳಲಾಗಿದೆ.

ಲೇವಾದೇವಿ ಕಾಯ್ದೆ  (ಪಿಎಂಎಲ್ ಎ)ಯ ಸೆಕ್ಷನ್ 3ರ ಅಡಿ ಜನಾರ್ದನ ರೆಡ್ಡಿ ವಿರುದ್ಧ ಮೊಕದ್ದಮೆ ದಾಖಲಿಸಿ, ರೆಡ್ಡಿ ಸೋದರರು ಮತ್ತು ಅವರ ಓಎಂಸಿ ಕಂಪೆನಿಗೆ ಸೇರಿದ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಇ.ಡಿ. ಯೋಜಿಸಿದೆ. ಈಗಾಗಲೇ ವೈ.ಎಸ್. ಜಗನ್ಮೋಹನ್ ರೆಡ್ಡಿ ವಿರುದ್ಧವೂ  ಇ.ಡಿ. ಇಂತಹದ್ದೇ ಮೊಕದ್ದಮೆಯನ್ನು ದಾಖಲಿಸಿದ್ದು, ಅವರ ಆಸ್ತಿ ಜಪ್ತಿ ಮಾತ್ರ ಮಾಡಿಲ್ಲ. ಆದರೆ ಜನಾರ್ದನ ರೆಡ್ಡಿ ವಿರುದ್ಧ ಇಂತಹ ಕ್ರಮಕ್ಕೆ ಇ.ಡಿ. ನಿಧಾನ ಮಾಡುವ ಸಾಧ್ಯತೆ ಕಡಿಮೆ ಇದೆ.

ಸಿಬಿಐ ಜೊತೆ ಮಾಹಿತಿ ವಿನಿಮಯ ಮಾಡಿಕೊಂಡು, ತನ್ನ ವರದಿ ಸಿದ್ಧಪಡಿಸುವ ಕಾರ್ಯದಲ್ಲಿ ಈಗ ಅದು ಮಗ್ನವಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.