ADVERTISEMENT

ರೆಡ್ಡಿ ಜಾಮೀನಿಗೆ ಹವಾಲ ಹಣ ಬಳಕೆ ಶಂಕೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2012, 20:20 IST
Last Updated 8 ಆಗಸ್ಟ್ 2012, 20:20 IST

ನವದೆಹಲಿ: `ಜಾಮೀನಿಗಾಗಿ ಲಂಚ ಪ್ರಕರಣ~ದಲ್ಲಿ ನ್ಯಾಯಾಧೀಶರುಗಳಿಗೆ ನೀಡಲಾದ ಹಣದ ಮೂಲದ ಬಗ್ಗೆ ಬಂಧಿತ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಇನ್ನೂ ತುಟಿ ಬಿಚ್ಚದೇ ಇರುವ ಕಾರಣ ಹವಾಲಾ ವ್ಯವಹಾರಗಳ ಮೂಲಕ ಈ ಹಣವನ್ನು ಸಂಗ್ರಹಿಸಿರಬಹುದು ಎಂದು ಆಂಧ್ರಪ್ರದೇಶದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸಂಶಯ ವ್ಯಕ್ತಪಡಿಸಿದೆ.

ಹಣದ ಮೂಲಗಳ ಬಗ್ಗೆ ಬಂಧಿತ ಶಾಸಕರುಗಳಾದ ಸೋಮಶೇಖರ ರೆಡ್ಡಿ ಹಾಗೂ ಸುರೇಶ್ ಬಾಬು ಇಬ್ಬರೂ ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಕೈದಿ ಸ್ಥಳಾಂತರ ವಾರಂಟ್ ಹೊರಡಿಸುವ ಮೂಲಕ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಅವರನ್ನು  ಹೈದರಾಬಾದ್‌ಗೆ ಕರೆತರುವ ಕುರಿತು ಎಸಿಬಿ ಆಲೋಚಿಸುತ್ತಿದೆ.

ಪ್ರಕರಣದ ಬಗ್ಗೆ  ಮಹತ್ವದ ಮಾಹಿತಿ ತಿಳಿಯಲು ಜನಾರ್ದನ ರೆಡ್ಡಿ ಅವರನ್ನು  ತೀವ್ರ ವಿಚಾರಣೆಗೆ ಒಳಪಡಿಸುವುದು ಅಗತ್ಯವಾಗಿದೆ ಎಂದು ತನಿಖಾ ಸಂಸ್ಥೆಯ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ಇದಕ್ಕೂ ಮುನ್ನ ತಾನು ಜನಾರ್ದನ ರೆಡ್ಡಿ ಅವರನ್ನು ಚಂಚಲಗುಡ ಕೇಂದ್ರ ಕಾರಾಗೃಹ ಮತ್ತು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಳ್ಳಾರಿಯ ಇತರರೊಂದಿಗೆ ಹಲವು ಬಾರಿ ಭೇಟಿ ನಡೆಸಿರುವುದಾಗಿ ಸುರೇಶ್ ಬಾಬು ಎಸಿಬಿ ಮುಂದೆ ತಪ್ಪೊಪ್ಪಿಕೊಂಡಿದ್ದರು.

ಬಳ್ಳಾರಿಯ ಚಿನ್ನದ ವ್ಯಾಪಾರಿಯೊಬ್ಬರ ಮೂಲಕ ಚಿನ್ನದ ಗಟ್ಟಿಯೊಂದನ್ನು ಸೋಮಶೇಖರ ರೆಡ್ಡಿ ಹೈದರಾಬಾದ್‌ನಲ್ಲಿ ಮಾರಾಟ ಮಾಡಿ ರೂ 4.5 ಕೋಟಿ ಸಂಗ್ರಹಿಸಿದ್ದರು ಎಂದು ಸುರೇಶ್ ಬಾಬು ತಿಳಿಸಿದ್ದರೆ, ಹಣವನ್ನು ಸುರೇಶ್ ಬಾಬು ಮತ್ತು ಜನಾರ್ದನ ರೆಡ್ಡಿ ಸಹಾಯಕ ಪ್ರಕಾಶ್ ಸಂಗ್ರಹಿಸಿದ್ದರು ಎಂದು ಸೋಮಶೇಖರ ರೆಡ್ಡಿ ತಿಳಿಸಿದ್ದರು.

ಜಾಮೀನಿಗಾಗಿನ ಲಂಚದ 20 ಕೋಟಿ ರೂಪಾಯಿಯಲ್ಲಿ 9.5 ಕೋಟಿ ಮಾತ್ರ ನೀಡಲಾಗಿತ್ತು ಎಂದು ಸೋಮಶೇಖರ ಹೇಳಿದರೂ, ಹಣ ಎಲ್ಲಿಂದ ಸಂಗ್ರಹಿಸಲಾಯಿತು ಮತ್ತು ಯಾರು ಅದನ್ನು ಹೈದರಾಬಾದ್‌ಗೆ ತಂದರು ಎಂಬುದರ ಕುರಿತು ಮಾಹಿತಿ ನೀಡಲಿಲ್ಲ. ರೂ 9.5 ಕೋಟಿ ಮೊತ್ತದಲ್ಲಿ ತನಿಖಾ ಸಂಸ್ಥೆಗಳು ಇದುವರೆಗೆ ಕೇವಲ ರೂ 6.6 ಕೋಟಿ ವಿವಿಧ ಆರೋಪಿಗಳ ಬ್ಯಾಂಕ್ ಲಾಕರ್ ಹಾಗೂ ಮನೆಗಳಿಂದ ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.