ADVERTISEMENT

ರೆಡ್ಡಿ ಜಾಮೀನು ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2013, 19:30 IST
Last Updated 6 ಡಿಸೆಂಬರ್ 2013, 19:30 IST

ನವದೆಹಲಿ: ‘ಅಸೋಸಿಯೇಟ್‌ ಮೈನಿಂಗ್ ಕಂಪೆನಿ’ (ಎಎಂಸಿ)ಯ ಅಕ್ರಮ ಗಣಿಗಾರಿಕೆ ಆರೋಪಕ್ಕೆ ಸಂಬ­ಂ­ಧಿ­ಸಿ­ದಂತೆ ಮಾಜಿ ಸಚಿವ ಜಿ.ಜನಾರ್ದನ­ರೆಡ್ಡಿ ಅವರಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್‌ ಶುಕ್ರವಾರ ನಿರಾಕರಿಸಿತು. ಎಎಂಸಿ ಕಂಪೆನಿ ಅಕ್ರಮ ಗಣಿಗಾರಿಕೆ ಪ್ರಕರಣದ ವಿಚಾರಣೆಯನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸುವಂತೆ ನ್ಯಾ. ಸಿ.ಕೆ. ಪ್ರಸಾದ್‌ ಹಾಗೂ ನ್ಯಾ. ಕುರಿಯನ್‌ ಜೋಸೆಫ್‌ ಅವರನ್ನೊಳ­ಗೊಂಡ ಸುಪ್ರೀಂಕೋರ್ಟ್‌ ಪೀಠ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಸೂಚಿಸಿತು.

ರಾಜ್ಯ ಹೈಕೋರ್ಟ್‌ 2012ರ ಡಿ. 5ರಂದು ಜನಾರ್ದನ ರೆಡ್ಡಿ ಜಾಮೀನು ಅರ್ಜಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. ಹಿರಿಯ ವಕೀಲ ಅಶೋಕ ಶ್ರೀವಾತ್ಸವ ಒಂದು ವರ್ಷ ಒಂಬತ್ತು ತಿಂಗಳಿಂದ ಮಾಜಿ ಸಚಿವರು ಜೈಲಿನಲ್ಲಿ­ದ್ದಾರೆ. ಸಿಬಿಐ ಇನ್ನೂ ಪ್ರಕರಣದಲ್ಲಿ ಆರೋಪ ಹೊರಿಸಲು ಸಾಧ್ಯವಾಗಿಲ್ಲ ಎಂದು ವಾದಿಸಿದರು.

ಎಎಂಸಿ ಪ್ರಕರಣದಲ್ಲಿ ಸುಮಾರು 300 ಸಾಕ್ಷ್ಯಗಳಿದ್ದಾರೆ. ಇದರಲ್ಲಿ 40 ಮಹತ್ವದ ಸಾಕ್ಷಿಗಳು. 18 ಅರಣ್ಯ ಕಾವಲು­ಗಾರರು ಸಾಕ್ಷಿಗಳಾಗಿದ್ದಾರೆ. ಈ ಹಂತದಲ್ಲಿ ಜನಾರ್ದನರೆಡ್ಡಿ ಅವರಿಗೆ ಜಾಮೀನು ನೀಡಿದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಸಿಬಿಐ ವಕೀಲರು ಹೇಳಿದರು.
ಪ್ರಕರಣದ ತನಿಖೆಯನ್ನು ಪೂರ್ಣ­ಗೊಳಿಸಿ ದೋಷಾರೋಪ ಹೊರಿಸಲು ಇನ್ನು ನಾಲ್ಕು ತಿಂಗಳ ಕಾಲಾವಕಾಶ ಹಿಡಿಯಲಿದೆ ಎಂದು ಸಿಬಿಐ ವಕೀಲರು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು.

ಸಿಬಿಐ ವಕೀಲರ ವಾದಕ್ಕೆ ಮನ್ನಣೆ ನೀಡಿದ ನ್ಯಾಯಪೀಠ ಆರು ತಿಂಗಳ ಕಾಲಾವಕಾಶ ನೀಡಿ ಜನಾರ್ದನರೆಡ್ಡಿ ಜಾಮೀನು ಅರ್ಜಿ ವಜಾ ಮಾಡಿತು. ಮಾಜಿ ಸಚಿವ ಜನಾರ್ದನರೆಡ್ಡಿ ಅಕ್ರಮ ಗಣಿಗಾರಿಕೆ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಹಾಗೂ ಲೇವಾದೇವಿ ಸೇರಿದಂತೆ ವಿವಿಧ ಅಕ್ರಮ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಆರೋಪಗಳನ್ನು ಎದುರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.