ನವದೆಹಲಿ (ಪಿಟಿಐ): ರೆಡ್ಡಿ ಸೋದರರ ಜತೆ ತಮಗೆ ವ್ಯಾವಹಾರಿಕ ಸಂಬಂಧವಿದೆ ಎಂಬ ಆರೋಪಗಳ ಬಗ್ಗೆ ತನಿಖೆಗೆ ಸಿದ್ಧವಿರುವುದಾಗಿ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಸೋಮವಾರ ಹೇಳಿದ್ದಾರೆ.
ಈ ಕುರಿತಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯಸಿಂಗ್ ಹಾಕಿದ್ದ ಸವಾಲನ್ನು ಸ್ವೀಕರಿಸುವುದಾಗಿ ಹೇಳಿರುವ ಸುಷ್ಮಾ, ಈ ವಿಷಯದ ಬಗ್ಗೆ ತನಿಖೆ ನಡೆಸಲು ಪ್ರಧಾನಿ ಮನಮೋಹನ್ ಸಿಂಗ್ ಅವರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯನ್ನೇ ನೇಮಕ ಮಾಡಬೇಕು ಎಂದಿದ್ದಾರೆ. ಈ ಹಿಂದೆಯೂ ಗಣಿ ಧಣಿಗಳ ಜತೆ ತಮಗೆ ಯಾವುದೇ ಬಾಂಧವ್ಯ ಇರಲಿಲ್ಲ, ಈಗಲೂ ಇಲ್ಲ ಎಂದು ಸುಷ್ಮಾ ಹೇಳಿದ್ದಾರೆ.
`ದಿಗ್ವಿಜಯಸಿಂಗ್ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ಖಂಡಿತವಾಗಿ ಈ ಬಗ್ಗೆ ತನಿಖೆ ನಡೆಯಬೇಕು. ಆಗ ಸತ್ಯಾಂಶ ಹೊರಬಿದ್ದು ನನಗೆ ನ್ಯಾಯ ದೊರಕುತ್ತದೆ~ ಎಂದು ತಿಳಿಸಿದ್ದಾರೆ.
`ನನ್ನ ವಿರುದ್ಧ ಸರ್ಕಾರ ಯಾವುದೇ ಸಂಸ್ಥೆಯಿಂದ ಯಾವುದೇ ತನಿಖೆ ನಡೆಸಬಹುದು. ಅಥವಾ ಪ್ರಧಾನಿಯವರೇ ಈ ಹಿಂದೆ ಪ್ರತಿಪಕ್ಷದ ನಾಯಕರೇ ವಿಷಯವೊಂದರ ತನಿಖೆ ನಡೆಸಬಹುದು ಎಂದು ಸದನದಲ್ಲಿ ಹೇಳಿದ್ದಂತೆ, ಈಗ ನಾನು ಪ್ರಧಾನಿ ಅವರೇ ನನ್ನ ವಿರುದ್ಧ ಯಾವುದೇ ತನಿಖೆ ಕೈಗೊಳ್ಳಲಿ ಎಂದು ಬಯಸುತ್ತೇನೆ~ ಎಂದು ಸುಷ್ಮಾ ಹೇಳಿದ್ದಾರೆ.
`ಪ್ರಧಾನಿಯವರು ತಮ್ಮ ಪ್ರತಿನಿಧಿಯಾಗಿ ದಿಗ್ವಿಜಯಸಿಂಗ್ ಅವರನ್ನೇ ತನಿಖೆಗೆ ನೇಮಿಸಿದರೆ ನನಗೆ ತುಂಬಾ ಸಂತೋಷವಾಗುತ್ತದೆ. ಆಗಲಾದರೂ ದಿಗ್ವಿಜಯಸಿಂಗ್ ಕುತೂಹಲ ತಣಿಯುತ್ತದೆ~ ಎಂದು ಹೇಳಿದ್ದಾರೆ.
`ರೆಡ್ಡಿ ಸೋದರರಿಂದ ತಮಗೆ ಈ ಹಿಂದೆಯಾಗಲೀ ಅಥವಾ ಈಗಾಗಲೀ ಏನೂ ಆಗ ಬೇಕಿಲ್ಲ~ ಎಂದೂ ಪುನರುಚ್ಚರಿಸಿದ್ದಾರೆ.
ನಾಯ್ಡು ನಿರಾಕರಣೆ: ದಿಗ್ವಿಜಯಸಿಂಗ್ ಮಾಡಿರುವ ಆರೋಪವನ್ನು ಬಿಜೆಪಿ ಹಿರಿಯ ನಾಯಕ ವೆಂಕಯ್ಯನಾಯ್ಡು ಅವರೂ ನಿರಾಕರಿಸಿದ್ದು `ಪಕ್ಷದ ಸಂಬಂಧ ಬಿಟ್ಟು ಜನಾರ್ದನ ರೆಡ್ಡಿ ಅಥವಾ ಗಣಿ ಉದ್ದಿಮೆಯ ಯಾರೊಂದಿಗೂ ನನಗೆ ಯಾವುದೇ ವೈಯಕ್ತಿಕ ಸಂಬಂಧ ಇಲ್ಲ~ ಎಂದು ನಾಯ್ಡು ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.