ADVERTISEMENT

ರೈತರ ಸಾಲ ಮನ್ನಾ: ಮಹಾರಾಷ್ಟ್ರ ನಿರ್ಧಾರ

ಇಂದಿನ ಧರಣಿ ಪ್ರತಿಭಟನೆ ಕೈಬಿಟ್ಟ ಸಂಘಟನೆಗಳು

ಪಿಟಿಐ
Published 11 ಜೂನ್ 2017, 19:34 IST
Last Updated 11 ಜೂನ್ 2017, 19:34 IST
ಮುಂಬೈನಲ್ಲಿ ರೈತರು ನಡೆಸುತ್ತಿರುವ ಧರಣಿಗೆ ಸಂಬಂಧಿಸಿದಂತೆ ಸಚಿವರು ರೈತ ಮುಖಂಡರ ಜೊತೆ ಇಲ್ಲಿಯ ಸಹ್ಯಾದ್ರಿ ಅತಿಥಿಗೃಹದಲ್ಲಿ ಭಾನುವಾರ ಚರ್ಚಿಸಿದರು   - ಪಿಟಿಐ ಚಿತ್ರ
ಮುಂಬೈನಲ್ಲಿ ರೈತರು ನಡೆಸುತ್ತಿರುವ ಧರಣಿಗೆ ಸಂಬಂಧಿಸಿದಂತೆ ಸಚಿವರು ರೈತ ಮುಖಂಡರ ಜೊತೆ ಇಲ್ಲಿಯ ಸಹ್ಯಾದ್ರಿ ಅತಿಥಿಗೃಹದಲ್ಲಿ ಭಾನುವಾರ ಚರ್ಚಿಸಿದರು - ಪಿಟಿಐ ಚಿತ್ರ   

ಮುಂಬೈ: ರೈತರ ಸಾಲ ಮನ್ನಾ ಮಾಡುವುದಾಗಿ ಮಹಾರಾಷ್ಟ್ರ ಸರ್ಕಾರ ಭಾನುವಾರ ಘೋಷಿಸಿದೆ. ಸಾಲ ಮನ್ನಾದ ಮಾನದಂಡಗಳನ್ನು ಸಿದ್ಧಪಡಿಸಲು ಸಮಿತಿಯೊಂದನ್ನು ರಚಿಸಿದೆ.

‘ಇಂದಿನಿಂದಲೇ (ಭಾನುವಾರ) ರೈತರ ಸಾಲ ಮನ್ನಾ ಆಗಿದೆ ಎಂದು ಭಾವಿಸಬಹುದು’ ಎಂದು ಕಂದಾಯ ಸಚಿವ ಚಂದ್ರಕಾಂತ ಪಾಟೀಲ್‌ ಹೇಳಿದರು.

ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಸಾಲ ಮನ್ನಾಕ್ಕೆ ಸಂಬಂಧಿಸಿ ರಚಿಸಿದ್ದ ಉನ್ನತ ಮಟ್ಟದ ಸಮಿತಿಗೆ ಪಾಟೀಲ್‌ ಅಧ್ಯಕ್ಷರಾಗಿದ್ದರು. ರೈತ ಮುಖಂಡರ ಜತೆ ಚರ್ಚೆ ನಡೆಸಿದ ನಂತರ ಪಾಟೀಲ್‌ ಅವರು ಸಾಲ ಮನ್ನಾವನ್ನು ಘೋಷಿಸಿದ್ದಾರೆ.

ಸಾಲ ಮನ್ನಾ ಮತ್ತು ಬೆಳೆಗೆ ಉತ್ತಮ ಬೆಲೆಗೆ ಆಗ್ರಹಿಸಿ ಕಳೆದ ಕೆಲವು ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದಾದ್ಯಂತ ಸೋಮವಾರ ಧರಣಿ ನಡೆಸಲು ರೈತರು ನಿರ್ಧರಿಸಿದ್ದರು. ಆದರೆ ಸರ್ಕಾರದ ನಿರ್ಧಾರದಿಂದಾಗಿ ಅದನ್ನು ಕೈಬಿಡಲಾಗಿದೆ.

‘ಸಾಲ ಮನ್ನಾದ ಮಾನದಂಡಗಳು ತೃಪ್ತಿಕರ ಅಲ್ಲದಿದ್ದರೆ ಮತ್ತೆ ಪ್ರತಿಭಟನೆ ನಡೆಸಲಾಗುವುದು’ ಎಂದು ಲೋಕಸಭಾ ಸದಸ್ಯ ಮತ್ತು ರೈತ ಮುಖಂಡ ರಾಜು ಶೆಟ್ಟಿ ಹೇಳಿದರು.

‘ರೈತರ ಎಲ್ಲ ಸಾಲಗಳನ್ನು ಮನ್ನಾ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ. ನಮಗೆ ಈಗ ದೀಪಾವಳಿ ಹಬ್ಬದ ಸಂಭ್ರಮ. ನಮ್ಮ ಎಲ್ಲ ಬೇಡಿಕೆಗಳೂ ಈಡೇರಿವೆ’ ಎಂದು ರೈತರ ಮತ್ತೊಬ್ಬ ಮುಖಂಡ ರಘುನಾಥದಾದಾ ಪಾಟೀಲ್‌ ತಿಳಿಸಿದರು.

ಭಾನುವಾರದಿಂದಲೇ ರೈತರಿಗೆ ಹೊಸ ಸಾಲ ದೊರೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ ಎಂದೂ ಅವರು ಹೇಳಿದರು.

ಸರ್ಕಾರ ನೀಡಿರುವ ಭರವಸೆ ಜುಲೈ 24ರೊಳಗೆ ಈಡೇರದಿದ್ದರೆ ಮತ್ತೆ ಚಳವಳಿ ಆರಂಭಿಸಲಾಗುವುದು ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ. 
ಈ ತಿಂಗಳ ಒಂದರಂದು ಅಹ್ಮದ್‌ನಗರ ಜಿಲ್ಲೆಯ ಗ್ರಾಮವೊಂದರ ರೈತರು ಪ್ರತಿಭಟನೆ ಆರಂಭಿಸಿದ್ದರು. ರೈತರ ಇತರ ಗುಂಪುಗಳೂ ಅದನ್ನು ಅನುಸರಿಸಿದ್ದವು. ಮುಂಬೈಗೆ ತರಕಾರಿ ಮತ್ತು ಹಾಲು ಪೂರೈಕೆ ಸ್ಥಗಿತಗೊಳಿಸಲೂ ಅವರು ಪ್ರಯತ್ನಿಸಿದ್ದರು.

ಫಡಣವೀಸ್‌ ಅವರು ರೈತ ಮುಖಂಡರ ಜತೆ ಸಭೆ ನಡೆಸಿ ಪ್ರತಿಭಟನೆ ನಿಲ್ಲಿಸಲು ಪ್ರಯತ್ನಿಸಿದ್ದರು. ಈ ರೈತ ಮುಖಂಡರಲ್ಲಿ ಕೆಲವರು ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಹತ್ತಿರದವರಾಗಿದ್ದರು. ಇದು ರೈತರನ್ನು ಕೆರಳಿಸಿತ್ತು. ಹಾಗಾಗಿ ನಂತರದ ದಿನಗಳಲ್ಲಿ ಪ್ರತಿಭಟನೆ ಇನ್ನಷ್ಟು ತೀವ್ರಗೊಂಡಿತ್ತು.

ಸೊಲ್ಲಾಪುರ ಜಿಲ್ಲೆಯಲ್ಲಿ ರೈತರೊಬ್ಬರು ಕಳೆದ ವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೊಲಕ್ಕೆ ಮುಖ್ಯಮಂತ್ರಿ ಭೇಟಿ ನೀಡದೆ ತಮ್ಮ ಅಂತ್ಯಕ್ರಿಯೆ ನಡೆಸಬಾರದು ಎಂದು ಅವರು ಪತ್ರವನ್ನೂ ಬರೆದು ಇರಿಸಿದ್ದರು.

ರೈತಪರ ನಿರ್ಧಾರಗಳು
* ಸಣ್ಣ ಮತ್ತು ಮಧ್ಯಮ ಪ್ರಮಾಣದ ಭೂ ಹಿಡುವಳಿ ಹೊಂದಿರುವ ರೈತರಿಗೆ ಸಾಲ ಮನ್ನಾ ಅನ್ವಯ
* ಸಾಲ ಮನ್ನಾ ಮಾನದಂಡಗಳು ಇನ್ನಷ್ಟೇ ನಿರ್ಧಾರ
* ಭಾನುವಾರದಿಂದಲೇ ರೈತರಿಗೆ ಹೊಸ ಸಾಲ

* ಹಾಲಿನ ದರ ಹೆಚ್ಚಿಸಬೇಕು ಎಂಬ ರೈತರ ಬೇಡಿಕೆಯನ್ನೂ ಸರ್ಕಾರ ಒಪ್ಪಿಕೊಂಡಿದೆ.
* ಸರ್ಕಾರ ಮನ್ನಾ ಮಾಡಬೇಕಿರುವ ಸಾಲದ ಮೊತ್ತ ಸುಮಾರು ₹30,000 ಕೋಟಿ
* ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತರ ವಿರುದ್ಧದ ಪ್ರಕರಣಗಳನ್ನು ಕೈಬಿಡಲು ನಿರ್ಧಾರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.