ADVERTISEMENT

ರೈಲಿನ ಮೇಲೆ ನಕ್ಸಲ್‌ದಾಳಿ

ಮಾವೊ ಉಗ್ರರಿಂದ 200 ಸುತ್ತು ಗುಂಡು- ಮೂವರ ಹತ್ಯೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2013, 19:39 IST
Last Updated 13 ಜೂನ್ 2013, 19:39 IST

ಪಟ್ನಾ/ಜಮುಯಿ (ಪಿಟಿಐ/ಐಎಎನ್‌ಎಸ್): ಬಿಹಾರದ ಜಮುಯಿ ಜಿಲ್ಲೆಯಲ್ಲಿ ಗುರುವಾರ ಹಾಡಹಗಲೇ 150ಕ್ಕೂ ಹೆಚ್ಚು ಶಸ್ತ್ರಸಜ್ಜಿತ ನಕ್ಸಲರು ಪ್ರಯಾಣಿಕರ ರೈಲಿನ ಮೇಲೆ ದಾಳಿ ಮಾಡಿ ಇಬ್ಬರು ಭದ್ರತಾ ಸಿಬ್ಬಂದಿ ಸೇರಿ ಮೂವರನ್ನು ಕೊಂದು ಅಟ್ಟಹಾಸ ಮೆರೆದಿದ್ದಾರೆ. ಘಟನೆಯಲ್ಲಿ ಆರು ಜನ ಗಾಯಗೊಂಡಿದ್ದಾರೆ.

ಕಳೆದ ತಿಂಗಳ 25ರಂದು ಛತ್ತೀಸಗಡದ ಸುಕ್ಮಾ ಜಿಲ್ಲೆಯಲ್ಲಿ ಕಾಂಗ್ರೆಸ್ ರ‍್ಯಾಲಿಯನ್ನು ಗುರಿಯಾಗಿಸಿಕೊಂಡಿದ್ದ ದಾಳಿಯ ಕರಾಳ ನೆನಪು ಮಾಸುವ ಮುನ್ನವೇ ಈ ದುಷ್ಕೃತ್ಯ ನಡೆದಿದೆ. ಈ ಘಟನೆಯಲ್ಲಿ ಮೊನ್ನೆ ಮೃತರಾದ ಮಾಜಿ ಕೇಂದ್ರ ಸಚಿವ ವಿ.ಸಿ. ಶುಕ್ಲಾ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸೇರಿದಂತೆ 27 ಜನ ಸತ್ತಿದ್ದರು.

ಘಟನೆ ವಿವರ: `ಧನಬಾದ್- ಪಟ್ನಾ ಇಂಟರ್‌ಸಿಟಿ ರೈಲು ಮಧ್ಯಾಹ್ನ 1.30ಕ್ಕೆ ಕುಂಧಾರ್ ನಿಲ್ದಾಣದಿಂದ ಸ್ವಲ್ಪವೇ ದೂರದಲ್ಲಿನ ಅರಣ್ಯ ಪ್ರದೇಶದ ಸುರಂಗ ಮಾರ್ಗ ಪ್ರವೇಶಿಸುತ್ತಿದ್ದಂತೆ ತಡೆಯಲಾಯಿತು. ಬಳಿಕ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಉಗ್ರರು ರೈಲಿನ ಮೇಲೆ ಯದ್ವಾತದ್ವಾ ಗುಂಡಿನ ಮಳೆಗರೆದರು. ರೈಲಿನಲ್ಲೇ ಪ್ರಯಾಣಿಕರ ಸೋಗಿನಲ್ಲಿದ್ದ ಉಗ್ರರು ಚೈನ್ ಎಳೆದು ರೈಲು ನಿಲ್ಲಿಸಿದ್ದನ್ನು ನೋಡಿದರೆ, ಇದಕ್ಕಾಗಿ ಅವರು ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದರು ಎನ್ನುವುದು ಗೊತ್ತಾಗುತ್ತದೆ' ಎಂದು ಪ್ರಯಾಣಿಕರೊಬ್ಬರು ಹೇಳಿದರು.

ಪೂರ್ವ ಮಧ್ಯ ರೈಲ್ವೆಯ ದಾನಾಪುರ ವಿಭಾಗದ ವ್ಯಾಪ್ತಿಗೆ ಬರುವ ಜಮುಯಿ ಜಿಲ್ಲೆಯಿಂದ 15 ಕಿ.ಮೀ ದೂರದ ಭಲುಯಿ ಮತ್ತು ಕುಂಧಾರ್ ನಿಲ್ದಾಣಗಳ ನಡುವೆ ಈ ಘಟನೆ ನಡೆದಿದೆ. ಈ ಸ್ಥಳ ಪಟ್ನಾದಿಂದ 180 ಕಿ.ಮೀ ದೂರದಲ್ಲಿದೆ.

ನಕ್ಸಲರು ರೈಲಿನ ಮೇಲೆ ಮನಬಂದಂತೆ 200 ಸುತ್ತು ಗುಂಡು ಹಾರಿಸಿದರು. ಅವರಲ್ಲಿ ಕೆಲವರು ಬೋಗಿಗಳಿಗೆ ನುಗ್ಗಿ ರೈಲಿನ ಕಾವಲಿಗಿದ್ದ ಆರ್‌ಪಿಎಫ್ (ರೈಲ್ವೆ ರಕ್ಷಣಾ ದಳ) ಸಿಬ್ಬಂದಿ ಬಳಿಯಿದ್ದ ಎ.ಕೆ. 47 ರೈಫಲ್ ಅಪಹರಿಸಿದರು. ಆರ್‌ಪಿಎಫ್ ಸಿಬ್ಬಂದಿಯ ಶಸ್ತ್ರಾಸ್ತ್ರಗಳು ಮತ್ತು ಪ್ರಯಾಣಿಕರನ್ನು ದೋಚುವುದೇ ಅವರ ಉದ್ದೇಶವಾಗಿತ್ತು ಎಂದು ಜಿಲ್ಲಾಧಿಕಾರಿ ಶಶಿಕಾಂತ ತಿವಾರಿ ತಿಳಿಸಿದರು.

ಶಸ್ತ್ರಾಸ್ತ್ರದ ಜತೆ ನಕ್ಸಲರು ಪ್ರಯಾಣಿಕರ ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ. ಸ್ಲೀಪರ್ ದರ್ಜೆಯಲ್ಲಿದ್ದ ಪ್ರಯಾಣಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿ ವಿಷಯ ತಿಳಿಯುತ್ತಿದ್ದಂತೆ ಸಿಆರ್‌ಪಿಎಫ್ ತುಕಡಿಯನ್ನು ಅಲ್ಲಿಗೆ ರವಾನಿಸಲಾಯಿತು.

ದಟ್ಟ ಅರಣ್ಯ ಪ್ರದೇಶದಲ್ಲಿ ಪೊಲೀಸ್ ಅಧಿಕಾರಿಗಳಾದ ಅಮಿತಾಭ್ ದಾಸ್, ಅಲೋಕ್ ಕುಮಾರ್ ಮತ್ತು ಮೊಹಮ್ಮದ್ ಅಬ್ದುಲ್ಲಾ ನೇತೃತ್ವದ ತಂಡ ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಂಡಿದೆ. ಅರಣ್ಯದ ಹಲವು ಕಡೆಗಳಲ್ಲಿ ರಕ್ತದ ಕಲೆ ಪತ್ತೆಯಾಗಿದ್ದು, ನಕ್ಸಲರಲ್ಲಿ ಕೆಲವರು ಸಾವನ್ನಪ್ಪಿರುವ ಅಥವಾ ಗಾಯಗೊಂಡಿರುವ ಸಾಧ್ಯತೆ ಇದೆ. ತಮ್ಮನ್ನು ಬೆನ್ನಟ್ಟಿದ್ದ ಭದ್ರತಾ ಪಡೆಗಳತ್ತ ಉಗ್ರರು ಬಾಂಬ್ ಎಸೆದು ಪರಾರಿಯಾಗಲು ಯತ್ನಿಸಿದ್ದಾರೆ' ಎಂದು  ರೈಲ್ವೆ ಡಿಐಜಿ ಕೆ.ಎಸ್. ಅನುಪಮ್ ತಿಳಿಸಿದ್ದಾರೆ.

ಮೃತರ ವಿವರ: ಜಮುಯಿಯ ಸಬ್ ಇನ್ಸಪೆಕ್ಟರ್ ಅಮಿತ್ ಕುಮಾರ್, ರೈಲ್ವೆ ರಕ್ಷಣಾ ದಳದ ಜವಾನ ಸುಖಂತ್ ದೇವನಾಥ್ ಮತ್ತು ಸೇವಕ ಇಸ್ಲಾಂ ನಕ್ಸಲರ ದಾಳಿಯಲ್ಲಿ ಮೃತಪಟ್ಟಿದ್ದಾರೆ. ದೇವನಾಥ್ ಜನವರಿಯಲ್ಲಿ ತರಬೇತಿ ಮುಗಿಸಿ ಆರ್‌ಪಿಎಫ್ ಸೇರಿದ್ದರು. ಈಚೆಗಷ್ಟೇ  ರೈಲಿನಲ್ಲಿ ಕಾವಲಿನ ಕರ್ತವ್ಯಕ್ಕೆ ನಿಯೋಜಿತರಾಗಿದ್ದರು. ಪಟ್ನಾದ ಅಮಿತ್ ಕುಮಾರ್ ಇತ್ತೀಚೆಗಷ್ಟೇ ಜಮುಯಿಗೆ ವರ್ಗವಾಗಿ ಬಂದಿದ್ದರು.

ಗುಂಡಿನ ದಾಳಿ ನಡೆದ ನಂತರ ಸುಮಾರು ಒಂದೂ ಕಾಲು ತಾಸು ರೈಲು ಸ್ಥಳದಲ್ಲೇ ನಿಂತಿತ್ತು. ಹೆಚ್ಚಿನ ಭದ್ರತಾ ಸಿಬ್ಬಂದಿ ಬಂದ ಬಳಿಕ ರೈಲನ್ನು ಕಿವುಲ್ ನಿಲ್ದಾಣಕ್ಕೆ ತೆಗೆದುಕೊಂಡು ಹೋಗಲಾಯಿತು. ಅಲ್ಲಿಂದ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು.

`ಘಟನೆಯಲ್ಲಿ ಮೂವರು ಪ್ರಯಾಣಿಕರು ಸಾವನ್ನಪ್ಪಿರುವುದು ದುರದೃಷ್ಟಕರ.  ನಕ್ಸಲ್‌ಪೀಡಿತ ಪ್ರದೇಶದಿಂದ ಸಂಚರಿಸುವ ರೈಲುಗಳಲ್ಲಿ ಇನ್ನು ಮುಂದೆ ಭದ್ರತೆ ಹೆಚ್ಚಿಸಲಾಗುವುದು' ಎಂದು ಪೂರ್ವ ಮಧ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಮಧುರೇಶ್ ಕುಮಾರ್ ತಿಳಿಸಿದ್ದಾರೆ.

ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ ಮತ್ತು ಗಂಭೀರವಾಗಿ ಗಾಯಗೊಂಡವರಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ರೈಲ್ವೆ ಸಚಿವ ಸಿ.ಪಿ. ಜೋಶಿ ದೆಹಲಿಯಲ್ಲಿ ಘೋಷಿಸಿದ್ದಾರೆ.

ಇದೇ ಮೊದಲಲ್ಲ: ನಕ್ಸಲರು ರೈಲಿನ ಮೇಲೆ ದಾಳಿ ನಡೆಸಿರುವುದು ಇದೇ ಮೊದಲಲ್ಲ.  2010ರಲ್ಲಿ ಪಶ್ಚಿಮ ಬಂಗಾಳದಲ್ಲಿ ಹೈ ಸ್ಪೀಡ್ ರೈಲಿನ ಮೇಲೆ ನಕ್ಸಲರು ನಡೆಸಿದ್ದ ದಾಳಿಗೆ ಹಲವರು ಮೃತಪಟ್ಟಿದ್ದರು. ಕನಿಷ್ಠ 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಗಣಿಗಾರಿಕೆ ವಿರೋಧಿಸಿ ಹತ್ಯೆ
ನಾಗಪುರ (ಪಿಟಿಐ
): ಮಹಾರಾಷ್ಟ್ರದ ಗಡಚಿರೋಲಿ ಜಿಲ್ಲೆಯ ಸೂರಜ್‌ಗಡದಲ್ಲಿ ಮಾವೊ ಉಗ್ರರು ಗುರುವಾರ ಪೊಲೀಸ್ ಸಿಬ್ಬಂದಿ ಸೇರಿ ಮೂವರನ್ನು ಹತ್ಯೆ ಮಾಡಿದ್ದಾರೆ.

ಕಲ್ಲಿದ್ದಲು ನಿಕ್ಷೇಪ ಗುತ್ತಿಗೆಗೆ ಪಡೆದಿದ್ದ ಖಾಸಗಿ ಉಕ್ಕು ಕಂಪೆನಿ ಲಾಯ್ಡ ಮೆಟಲ್ಸ್‌ನ ಉಪಾಧ್ಯಕ್ಷ ಜಸ್ಪಾಲ್ ಸಿಂಗ್ ಧಿಲ್ಲೊನ್(60), ಮಲ್ಲಿಕಾರ್ಜುನ ರೆಡ್ಡಿ (45) ಮತ್ತು ಪೊಲೀಸ್ ಸಿಬ್ಬಂದಿ ರಾಜು (65) ಅವರನ್ನು ನಕ್ಸಲರು ಗುಂಡಿಕ್ಕಿ ಕೊಂದಿದ್ದಾರೆ.

ಖನಿಜ ಸಂಪನ್ಮೂಲದಿಂದ ಸಂಪದ್ಭರಿತವಾಗಿರುವ ಸೂರಜ್‌ಗಡ ಸಮೀಪದ ಗಣಿಯನ್ನು ಖಾಸಗಿ ಉಕ್ಕು ಕಂಪೆನಿಗೆ ಗುತ್ತಿಗೆಗೆ ನೀಡಲಾಗಿತ್ತು.  ಆದರೆ, ಈ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವುದನ್ನು ಆರಂಭದಿಂದಲೂ ಮಾವೊ ಉಗ್ರರು ವಿರೋಧಿಸುತ್ತಿದ್ದರು.

ಮಾವೊ ಉಗ್ರರ ಜೊತೆ ಮಾತನಾಡಲು ಈ ಮೂವರು ಬುಧವಾರ ರಾತ್ರಿ 9 ಗಂಟೆಗೆ ಮಂಗೇ ಗ್ರಾಮಕ್ಕೆ ತೆರಳಿದ್ದಾಗ ಈ ಘಟನೆ ಜರುಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.