ADVERTISEMENT

ರೈಲು ಚಾಲಕನ ಮೇಲೆ ನವಿಲು ದಾಳಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2013, 19:59 IST
Last Updated 31 ಜನವರಿ 2013, 19:59 IST
ರೈಲು ಚಾಲಕನ ಮೇಲೆ ನವಿಲು ದಾಳಿ
ರೈಲು ಚಾಲಕನ ಮೇಲೆ ನವಿಲು ದಾಳಿ   

ಮದುರೆ (ಪಿಟಿಐ):  ನವಿಲೊಂದು ರೈಲಿನ ಕ್ಯಾಬಿನ್‌ಗೆ ನುಗ್ಗಿ ಚಾಲಕನನ್ನು ಗಾಯಗೊಳಿಸಿದ ಅಪರೂಪದ  ಹಾಗೂ ಅಚ್ಚರಿಯ ಘಟನೆ ತಮಿಳುನಾಡಿನ ವಿರುದುನಗರ ಜಿಲ್ಲೆಯಲ್ಲಿ ಸಂಭವಿಸಿದೆ.


ಬುಧವಾರ ರಾತ್ರಿ ಮದುರೆಯಿಂದ ಶೆಂಗೊಟೈನತ್ತ ತೆರಳುತ್ತಿದ್ದ ರೈಲಿನ ಕ್ಯಾಬಿನ್‌ಗೆ ನುಗ್ಗಿದ ನವಿಲೊಂದು ಸಹಾಯಕ ಚಾಲಕನ ಮೇಲೆ ದಾಳಿ ಮಾಡಿದ್ದರಿಂದ  ಒಂದು ಗಂಟೆಗಳ ಕಾಲ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಯಿತು.

ಪ್ರಾಣಿಗಳು ರೈಲು ಹಳಿ ದಾಟುತ್ತಿದ್ದ ವೇಳೆ ರೈಲು ನಿಲ್ಲಿಸಿ ಅವುಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡುವುದು  ಸಾಮಾನ್ಯವಾದ ಸಂಗತಿ. ಆದರೆ ಇಲ್ಲಿ ಮೊದಲ ಬಾರಿಗೆ ನವಿಲೊಂದು ರೈಲು ಸಂಚಾರಕ್ಕೆ ತಡೆ ಒಡ್ಡಿದೆ.

ಘಟನೆ ವಿವರ: ವಿರುದುನಗರದ ತಿರುತ್ತಂಗಳ್ ಎಂಬಲ್ಲಿ ರೈಲು ಗಂಟೆಗೆ ಸುಮಾರು 80 ಕಿ.ಮೀ. ವೇಗದಲ್ಲಿ ಚಲಿಸುತ್ತಿತ್ತು. ಆಗ ನವಿಲೊಂದು ಹಾರಿ ಬಂದು ಕ್ಯಾಬಿನ್ ಪ್ರವೇಶಿಸಿ ಇಂಜಿನ್ ಶಬ್ದಕ್ಕೆ ಬೆದರಿ ರೆಕ್ಕೆ ಬಡಿಯುತ್ತ ಸಹಾಯಕ ಚಾಲಕ ಅಲ್ಗುರಾಜ್ ಮೇಲೆ ಉಗುರು ಹಾಗೂ ಕೊಕ್ಕಿನಿಂದ ದಾಳಿ ಮಾಡಿ ಗಾಯಗೊಳಿಸಿತು.  ಮುಖ್ಯ  ಚಾಲಕನ ಮೇಲೆ ದಾಳಿ ನಡೆಸಲಿಲ್ಲ. ಕ್ಯಾಬಿನಿನ ಗಾಜಿನ ಮೇಲೆ ನವಿಲು ಎರಗಿದ ಕಾರಣ ಗಾಯಗೊಂಡು ಸತ್ತಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ಗಾಯಗೊಂಡಿರುವ ಸಹಾಯಕ ಚಾಲಕನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT