ADVERTISEMENT

ರೈಲ್ವೆಯಲ್ಲಿ ಅವ್ಯವಸ್ಥೆ, ಅಪಘಾತ 2016–17ರಲ್ಲೇ ಹೆಚ್ಚು

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 13:04 IST
Last Updated 5 ಅಕ್ಟೋಬರ್ 2017, 13:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮೂಲ ಸೌಕರ್ಯ ಕೊರತೆ ಮತ್ತು ಮಾನವ ವೈಫಲ್ಯದಿಂದಾಗಿ ರೈಲು ಹಳಿ ತಪ್ಪುವಿಕೆಯಂಥ ಅಪಘಾತಗಳು 2016–17ನೇ ಸಾಲಿನಲ್ಲಿ ಅತಿ ಹೆಚ್ಚು ಸಂಭವಿಸಿವೆ ಎಂದು ತಜ್ಞರ ಮಾಹಿತಿ ಉಲ್ಲೇಖಿಸಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಈ ಅವಧಿಯಲ್ಲಿ ರೈಲು ಹಳಿಯಲ್ಲಿ ಲೋಪ ಹಾಗೂ ವೈಫಲ್ಯ ಕಂಡುಬಂದ 3,546 ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದೇ ಅವಧಿಯಲ್ಲಿ ಸಿಗ್ನಲಿಂಗ್ ಉಪಕರಣಗಳ ವೈಫಲ್ಯದ 1.30 ಲಕ್ಷ ಪ್ರಕರಣಗಳು ದಾಖಲಾಗಿವೆ. ರೈಲ್ವೆ ಸುರಕ್ಷತೆ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು 2012ರಲ್ಲಿ ರಚಿಸಲಾಗಿದ್ದ ಅನಿಲ್ ಕಾಕೋಡ್ಕರ್ ಸಮಿತಿಯು ನೀಡಿದ್ದ ಶಿಫಾರಸುಗಳನ್ನು ಇನ್ನೂ ಜಾರಿ ಮಾಡಲಾಗಿಲ್ಲ. ರೈಲ್ವೆ ಸುರಕ್ಷತೆಗಾಗಿ ಐದು ವರ್ಷದ ಅವಧಿಗೆ ₹1 ಲಕ್ಷ ಕೋಟಿ ಹೂಡಿಕೆ ಮಾಡುವಂತೆ ಸಮಿತಿ ಶಿಫಾರಸು ಮಾಡಿತ್ತು.

ರೈಲುಗಳಲ್ಲಿ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಪೂರೈಸಲಾಗುತ್ತಿರುವ ಆಹಾರ ಮತ್ತು ಪಾನೀಯಗಳು ಕಳಪೆ ಗುಣಮಟ್ಟದ್ದಾಗಿದೆ. ಜತೆಗೆ, ಮಾನವ ಸೇವನಗೆ ಯೋಗ್ಯವಾಗಿಲ್ಲ ಎಂದು ಇತ್ತೀಚೆಗೆ ಮಹಾಲೇಖಪಾಲರು ವರದಿ ನೀಡಿದ್ದರು. ಇದರ ಬೆನ್ನಲ್ಲೇ, ರೈಲಿನಲ್ಲಿ ಕಲುಷಿತ ಪಾನೀಯ ನೀಡಲಾಗಿದೆ ಎಂದು ರೈಲ್ವೆ ಇಲಾಖೆಯ ಮಾಜಿ ಸಚಿವ ದಿನೇಶ್ ತ್ರಿವೇದಿ ದೂರಿದ್ದರು ಎಂಬುದನ್ನೂ ವರದಿಯಲ್ಲಿ ಹೇಳಲಾಗಿದೆ
ಮುಂಬೈ ಎಲ್ಫಿನ್‍ಸ್ಟೋನ್ ರೈಲ್ವೆ ನಿಲ್ದಾಣ ಬಳಿ ಇತ್ತೀಚೆಗೆ ಸಂಭವಿಸಿದ ಕಾಲ್ತುಳಿತದಲ್ಲಿ 22 ಮಂದಿ ಮೃತಪಟ್ಟಿದ್ದರು. ಘಟನೆಗೆ ಮೂಲ ಸೌಕರ್ಯ ಕೊರತೆಯೂ ಕಾರಣ ಎನ್ನಲಾಗಿತ್ತು. ಈ ಮಧ್ಯೆ, ರೈಲ್ವೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸದೆ ಕೇಂದ್ರ ಸರ್ಕಾರವು ಬುಲೆಟ್‌ ಟ್ರೈನ್‌ನಂಥ ಯೋಜನೆ ಹಮ್ಮಿಕೊಂಡಿರುವುದು ಸರಿಯಲ್ಲ ಎಂಬ ಆಕ್ಷೇಪವೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.