ADVERTISEMENT

ರ‍್ಯಾಗಿಂಗ್ ಕಿರುಕುಳ: ರೈಲಿನ ಮುಂದಕ್ಕೆ ನೆಗೆದು ವಿದ್ಯಾರ್ಥಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 12 ಮೇ 2013, 10:54 IST
Last Updated 12 ಮೇ 2013, 10:54 IST

ಮುಂಬೈ (ಪಿಟಿಐ): ತನ್ನ ಕಾಲೇಜು ಸಹಪಾಠಿಗಳಿಂದ ಕಳೆದ ಎರಡು ತಿಂಗಳುಗಳಿಂದ ರ‍್ಯಾಗಿಂಗ್ ಗೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡಿದ್ದ 19ರ ಹರೆಯದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಲೋಕಲ್ ರೈಲುಗಾಡಿಯೊಂದರ ಮುಂದಕ್ಕೆ ನೆಗೆದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಭಾನುವಾರ ಇಲ್ಲಿ ತಿಳಿಸಿದ್ದಾರೆ.

ಸಾಯುವ ಮುನ್ನ ಬರೆದಿಟ್ಟಿರುವ ಟಿಪ್ಪಣಿಯಲ್ಲಿ ಈ ವಿದ್ಯಾರ್ಥಿ ತನ್ನ ಕಾಲೇಜಿನ ಇಬ್ಬರು ಸಹಪಾಠಿಗಳ ಹೆಸರು ಬರೆದಿಟ್ಟು ಅವರು ತನಗೆ ಚಿತ್ರಹಿಂಸೆ ನೀಡುತ್ತಿದ್ದುದಾಗಿ ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ನವಿ ಮುಂಬೈಯ ರಾಮರಾವ್ ಅದಿಕ್ ತಂತ್ರಜ್ಞಾನ ಸಂಸ್ಥೆಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯೂನಿಕೇಷನ್ಸ್ ವಿಭಾಗದಲ್ಲಿ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದ ನಿತಿನ್ ಪಡಾಲ್ಕರ್ ಕಳೆದ ಕೆಲ ತಿಂಗಳುಗಳಿಂದ ಖಿನ್ನನಾಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಿತಿನ್ ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ತನ್ನ ಗೆಳೆಯರನ್ನು ಭೇಟಿ ಮಾಡಲು ಹೋಗುತ್ತಿರುವುದಾಗಿ ತಿಳಿಸಿ ತನ್ನ ಮನೆಯಿಂದ ಹೊರಟಿದ್ದ. ರಾತ್ರಿ 8.50 ಗಂಟೆಗೆ ನಿತಿನ್ ಕುಟುಂಬಕ್ಕೆ ಪೊಲೀಸರ ಮೂಲಕ ಆತನ ಸಾವಿನ ವರ್ತಮಾನ ಲಭಿಸಿತು.

ಪ್ರಾಥಮಿಕ ತನಿಖೆ ಮತ್ತು ಸಾವಿನ ಸಂದರ್ಭಗಳನ್ನು ಆಧರಿಸಿ 'ಪಡಾಲ್ಕರ್ ರ‍್ಯಾಗಿಂಗ್ ಗೆ ಬಲಿಪಶು' ಎಂಬುದಾಗಿ ಶಂಕಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿದವು.

'ಪಡಾಲ್ಕರನ ಇಬ್ಬರು ಕಾಲೇಜು ಸಹಪಾಠಿಗಳನ್ನು ನಾಳೆ ನಾವು ಪ್ರಶ್ನಿಸುತ್ತೇವೆ' ಎಂದು ಕಲ್ಯಾಣದ ಸರ್ಕಾರಿ ರೈಲ್ವೇ ಪೊಲೀಸ್ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.