ನವದೆಹಲಿ: `ಅಕ್ರಮ ಗಣಿಗಾರಿಕೆ ಹಗರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ `ಜಾಮೀನು ಲಂಚ~ಕ್ಕೆ ಕಂಪ್ಲಿ ಶಾಸಕ ಸುರೇಶ್ ಬಾಬು ಹಾಗೂ ರೆಡ್ಡಿ ಆಪ್ತ ಸಹಾಯಕ ಪ್ರಕಾಶ್ ರೂ. 4.5 ಕೋಟಿ ವ್ಯವಸ್ಥೆ ಮಾಡಿದ್ದಾರೆ~ ಎಂಬ ಮಹತ್ವದ ಮಾಹಿತಿಯನ್ನು ಬಳ್ಳಾರಿ ನಗರದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ಕೇಂದ್ರ ತನಿಖಾ ದಳದ ಭ್ರಷ್ಟಾಚಾರ ನಿಗ್ರಹ ವಿಭಾಗದ ಮುಂದೆ ಬಹಿರಂಗಪಡಿಸಿದ್ದಾರೆ.
`ಜನಾರ್ದನ ರೆಡ್ಡಿ ಜಾಮೀನಿಗೆ ರೂ. 20 ಕೋಟಿಗೆ ಒಪ್ಪಂದವಾಗಿತ್ತು. ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಪಟ್ಟಾಭಿ ರಾಮರಾವ್ ಮೇ 11 ರಂದು ಜಾಮೀನು ಆದೇಶ ಹೊರಡಿಸಿದ ಮೇಲೆ ರೂ. 4.5 ಕೋಟಿ ಹಣ ನೀಡಲಾಯಿತು. ಈ ಹಣವನ್ನು ಸುರೇಶ್ ಬಾಬು ಹಾಗೂ ಪ್ರಕಾಶ್ ಹೊಂದಿಸಿದ್ದಾರೆ~ ಎಂದು `ಜಾಮೀನು ಡೀಲ್~ನಲ್ಲಿ ಪ್ರಮುಖ ಪಾತ್ರ ವಹಿಸಿರುವ ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ಸತತ ಮೂರು ದಿನಗಳ ವಿಚಾರಣೆ ಬಳಿಕ `ಜಾಮೀನು ಡೀಲ್~ನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾಗಿ ಸೋಮಶೇಖರರೆಡ್ಡಿ ಒಪ್ಪಿದ್ದಾರೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ರಿಮಾಂಡ್ ಅರ್ಜಿಯಲ್ಲಿ `ಎಸಿಬಿ~ ವಿವರಿಸಿದೆ.
`ನಾನು ಏಪ್ರಿಲ್ ಕೊನೆಯ ವಾರ ದಶರಥ ರಾಮರೆಡ್ಡಿ (ರೆಡ್ಡಿಗಳ ಸಂಬಂಧಿ) ಅವರ ಜತೆ ಜನಾರ್ದನರೆಡ್ಡಿ ಅವರ ವಕೀಲ ಉಮಾಮಹೇಶ್ವರ ಅವರ ಶಾಂತಿನಗರದ ಕಚೇರಿಗೆ ಹೋಗಿದ್ದೆ. ಅಲ್ಲಿ ರಿಯಲ್‌ಎಸ್ಟೇಟ್ ಉದ್ಯಮಿ ಯಾದಗಿರಿರಾವ್ ಪರಿಚಯವಾಯಿತು. ಆ ಸಂದರ್ಭದಲ್ಲಿ ಕಿರಿಯ ವಕೀಲ ಆದಿತ್ಯ ಅವರೂ ಇದ್ದರು. ಮೇ ಮೊದಲ ವಾರ ಮತ್ತೆ ದಶರಥ ರಾಮರೆಡ್ಡಿ ಜತೆ ಯಾದಗಿರಿರಾವ್ ಅವರನ್ನು ಭೇಟಿ ಮಾಡಿದ್ದೆ~ ಎಂದು ಸೋಮಶೇಖರರೆಡ್ಡಿ ಹೇಳಿದ್ದಾರೆ.
ಹಣ ಹೊಂದಿಸಿದ್ದು ಯಾರು? |
ಜನಾರ್ದನರೆಡ್ಡಿ `ಜಾಮೀನು ಡೀಲ್~ಗೆ ಹಣ ಹೊಂದಿಸಿದವರು ಯಾರು? ಕಂಪ್ಲಿ ಶಾಸಕ ಸುರೇಶ್ ಬಾಬು, ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಹೆಸರು ಹೇಳಿದ್ದಾರೆ. ಆದರೆ, ಸುರೇಶ್ ಬಾಬು ಮತ್ತು ಜನಾರ್ದನರೆಡ್ಡಿ ಆಪ್ತ ಸಹಾಯಕ ಪ್ರಕಾಶ್ ಅವರತ್ತ ಸೋಮಶೇಖರ ರೆಡ್ಡಿ ಬೆರಳು ತೋರಿದ್ದಾರೆ. ಚಿನ್ನದ ಗಟ್ಟಿ ಮಾರಿ ಸೋಮಶೇಖರ ರೆಡ್ಡಿ ಹಣ ಹೊಂದಿಸಿದರು ಎಂದು ಬಾಬು `ಎಸಿಬಿ~ಗೆ ಹೇಳಿಕೆ ನೀಡಿದ್ದಾರೆ. ಒಪ್ಪಂದದ ಮೊದಲ ಕಂತು ರೂ. 4.5 ಕೋಟಿ ಕೊಟ್ಟಿದ್ದು ಬಾಬು ಮತ್ತು ಪ್ರಕಾಶ್ ಎಂದು ರೆಡ್ಡಿ ವಿವರಿಸಿದ್ದಾರೆ. ಇಬ್ಬರೂ ಶಾಸಕರನ್ನು`ಎಸಿಬಿ~ ಈಗಾಗಲೇ ಬಂಧಿಸಿದೆ. |
`ಮಾತುಕತೆ ಸಮಯದಲ್ಲಿ ನಿವೃತ್ತ ನ್ಯಾಯಾಧೀಶ ಟಿ.ವಿ. ಚಲಪತಿರಾವ್ ಮೂಲಕ ಸಿಬಿಐ ನ್ಯಾಯಾಧೀಶ ಪಟ್ಟಾಭಿರಾಮ ರಾವ್ ಅವರ ಮೇಲೆ ಪ್ರಭಾವ ಬೀರಿ ಮತ್ತೊಂದು ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯೊಬ್ಬರಿಗೆ ಜಾಮೀನು ಕೊಡಿಸಿದ್ದಾಗಿ ಯಾದಗಿರಿರಾವ್ ಹೇಳಿದರು. ಹಾಗಾದರೆ ಬಂಧನದಲ್ಲಿರುವ ಜನಾರ್ದನರೆಡ್ಡಿ ಅವರಿಗೆ ಜಾಮೀನು ಕೊಡಿಸಲು ಸಾಧ್ಯವೆ. ಇದಕ್ಕೆ ಕೇಳಿದಷ್ಟು ಹಣ ಕೊಡಲು ಸಿದ್ಧ~ ಎಂದು ಸೋಮಶೇಖರ ರೆಡ್ಡಿ ಆಮಿಷ ತೋರಿದ್ದಾರೆ.
`ಜನಾರ್ದನರೆಡ್ಡಿ ಜಾಮೀನಿಗೆ ವ್ಯವಸ್ಥೆ ಮಾಡಬಹುದು~ ಎಂದು ಚಲಪತಿರಾವ್ ಯಾದಗಿರಿರಾವ್‌ಗೆ ತಿಳಿಸಿದರು. ಮೇ 9ರ ಸಂಜೆ ಜನಾರ್ದನ ರೆಡ್ಡಿ ವಕೀಲ ಉಮಾ ಮಹೇಶ್ವರ್ ಅವರ ಕಚೇರಿಯಲ್ಲಿ `ಜಾಮೀನು ಒಪ್ಪಂದ~ ಅಂತಿಮಗೊಳಿಸಲಾಯಿತು. `ಪಟ್ಟಾಭಿರಾಮರಾವ್‌ಗೆ ರೂ. 5 ಕೋಟಿ, ಚಲಪತಿರಾವ್‌ಗೆ ರೂ. 5 ಕೋಟಿ, ರೂ. ತಮಗೆ 5 ಕೋಟಿ, ನ್ಯಾಯಾಲಯದ ಖರ್ಚಿಗೆ ರೂ. 5 ಕೋಟಿ ಹಣ ಕೊಡುವುದಾದರೆ ಜಾಮೀನು ಕೊಡಿಸಬಹುದು~ ಎಂದು ಯಾದಗಿರಿರಾವ್ ತಿಳಿಸಿದರು. ಈ ಬೇಡಿಕೆಗೆ ಸೋಮಶೇಖರ ರೆಡ್ಡಿ ಒಪ್ಪಿದರು.
`ಪಟ್ಟಾಭಿರಾಮರಾವ್ ಒಪ್ಪಿರುವುದಕ್ಕೆ ಏನಾದರೂ ಗ್ಯಾರಂಟಿ ಬೇಕು~ ಎಂದು ಸೋಮಶೇಖರ ರೆಡ್ಡಿ ತಾಕೀತು ಮಾಡುತ್ತಾರೆ. ಅವರಿಗೆ ವಿಶ್ವಾಸ ಮೂಡಿಸಲು ಮಾರನೆ ದಿನ `ಪ್ಯಾರಡೈಸ್ ಹೊಟೇಲ್~ನಲ್ಲಿ ಚಲಪತಿರಾವ್ ಮತ್ತು ಪಟ್ಟಾಭಿರಾಮರಾವ್ ಪುತ್ರ ಟಿ.ವಿ.ರವಿಚಂದ್ರ ಅವರನ್ನು ಸೋಮಶೇಖರರೆಡ್ಡಿ ಮತ್ತು ದಶರಥರಾಮರೆಡ್ಡಿ ಅವರಿಗೆ ಯಾದಗಿರಿರಾವ್ ಪರಿಚಯ ಮಾಡಿಕೊಟ್ಟರು. ಕಿರಿಯ ವಕೀಲ ಆದಿತ್ಯ ಈ ಸಂದರ್ಭದಲ್ಲಿ ಇದ್ದರು.
ರೂ. 20 ಕೋಟಿಯಲ್ಲಿ ರೂ. 10 ಕೋಟಿಯನ್ನು ಜಾಮೀನು ಆದೇಶ ಹೊರಬಿದ್ದಾಗ, ಉಳಿದ ರೂ. 10 ಕೋಟಿಯನ್ನು ಆದೇಶದ ಪ್ರತಿ ಕೈಸೇರಿದ ಮೇಲೆ ಕೊಡುವ ಒಪ್ಪಂದವಾಯಿತು. ಮೇ 11ರಂದು ಸಂಜೆ ಐದು ಗಂಟೆಗೆ ಸಿಬಿಐ ನ್ಯಾಯಾಲಯ ಜನಾರ್ದನರೆಡ್ಡಿಗೆ ಜಾಮೀನು ನೀಡಿತು.
ಆ ಸಮಯದಲ್ಲಿ ಸೋಮಶೇಖರರೆಡ್ಡಿ, ದಶರಥರಾಮರೆಡ್ಡಿ ನ್ಯಾಯಾಲಯದಲ್ಲಿ ಹಾಜರಿದ್ದರು. ಶಾಸಕ ಸುರೇಶ್ ಬಾಬು ಬಂದು ಅವರನ್ನು ಸೇರಿಸಿಕೊಂಡರು.
ಅದೇ ದಿನ ಸಂಜೆ ಏಳು ಗಂಟೆಗೆ ಯಾದಗಿರಿರಾವ್ ಹಣ ಕೇಳಿ ಸೋಮಶೇಖರ ರೆಡ್ಡಿಗೆ ಫೋನಾಯಿಸಿದರು. ರಾತ್ರಿ 9.30ಕ್ಕೆ `ದಾಸಪಲ್ಲ ಹೊಟೇಲ್~ನಲ್ಲಿ ದಶರಥ ರಾಮರೆಡ್ಡಿ ರೂ. 4.5ಕೋಟಿ ಹಣವಿದ್ದ ಒಂಬತ್ತು ಚೀಲಗಳನ್ನು ಯಾದಗಿರಿರಾವ್ ಅವರಿಗೆ ನೀಡಿದರು. ಉಳಿದ ಹಣವನ್ನು ಆದೇಶ ಪ್ರತಿ ಸಿಕ್ಕ ನಂತರ ಕೊಡುವ ಭರವಸೆ ನೀಡಲಾಯಿತು.
ಯಾದಗಿರಿರಾವ್ ಮಿಕ್ಕ ಹಣ ನೀಡುವಂತೆ ಸೋಮಶೇಖರ ರೆಡ್ಡಿಗೆ ಕರೆ ಮಾಡಿದರು. `ಜಾಮೀನು ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಸಿಬಿಐ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ಆ ಅರ್ಜಿ ವಜಾ ಆದರೆ ಪಾವತಿಸಲಾಗುವುದು~ ಎಂದು ಸೋಮಶೇಖರರೆಡ್ಡಿ ನುಡಿದರು. ಒಂದೆರಡು ದಿನದ ಬಳಿಕ ದಶರಥ ರಾಮರೆಡ್ಡಿ ಇನ್ನೂ ರೂ. 5 ಕೋಟಿ ಹಣವನ್ನು ಯಾದಗಿರಿರಾವ್ ಅವರಿಗೆ ತಲುಪಿಸಿದ್ದಾಗಿ ಸೋಮಶೇಖರ ರೆಡ್ಡಿಗೆ ತಿಳಿಸಿದರು.
ಸುರೇಶ್ ಬಾಬು ಹಾಗೂ ಜನಾರ್ದನರೆಡ್ಡಿ ಆಪ್ತ ಸಹಾಯಕ ಪ್ರಕಾಶ್ ರೂ. 4.5 ಕೋಟಿ ಹೊಂದಿಸಿದ್ದಾರೆ ಎಂದು ಸೋಮಶೇಖರರೆಡ್ಡಿ `ಎಸಿಬಿ~ಗೆ ತಿಳಿಸಿದ್ದಾರೆ. ಉಳಿದ ಹಣದ ಮೂಲವನ್ನು ರೆಡ್ಡಿ ಬಹಿರಂಗಪಡಿಸಿಲ್ಲ ಎಂದು `ಎಸಿಬಿ~ ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖಿಸಿದೆ. ಆರೋಪಿಗಳ ನಡುವೆ ಮೊಬೈಲ್‌ನಲ್ಲಿ ನಡೆದಿರುವ ಚರ್ಚೆ ಜಾಮೀನು ಡೀಲ್‌ಗೆ ಪ್ರಮುಖ ದಾಖಲೆ ಆಗಿದೆ ಎಂದು ತನಿಖಾ ದಳ ಸ್ಪಷ್ಟಪಡಿಸಿದೆ.
ಸೋಮಶೇಖರ್ ರೆಡ್ಡಿ ವಜಾಕ್ಕೆ ಆಗ್ರಹ
ಚಿತ್ರದುರ್ಗ: ಜಾಮೀನಿಗಾಗಿ ಲಂಚ ಹಗರಣದಲ್ಲಿ ಬಂಧಿತರಾಗಿರುವ ಶಾಸಕ ಸೋಮಶೇಖರ್ ರೆಡ್ಡಿ ಅವರನ್ನು ಕೆಎಂಎಎಫ್ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಸಮಾಜ ಪರಿವರ್ತನಾ ಸಮುದಾಯ ಸಂಘಟನೆಯ ಎಸ್.ಆರ್. ಹಿರೇಮಠ್ ಅವರು ಒತ್ತಾಯಿಸಿದ್ದಾರೆ.
ಸೋಮಶೇಖರ ರೆಡ್ಡಿ ವಿರುದ್ಧ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಕ್ಷಣ ಕ್ರಮಕೈಗೊಳ್ಳಬೇಕು. ಸಾರ್ವಜನಿಕ ಜೀವನದಲ್ಲಿ ಭ್ರಷ್ಟರಿಗೆ ಅವಕಾಶ ನೀಡಬಾರದು ಎಂದು ಅವರು ಆಗ್ರಹಿಸಿದರು.
ವಜಾ ಸುಲಭವಲ್ಲ: ಸಹಕಾರ ಸಚಿವ ಪುಟ್ಟಸ್ವಾಮಿ
ಬೆಂಗಳೂರು: ಬಂಧನಕ್ಕೆ ಒಳಗಾಗಿರುವ ಜಿ.ಸೋಮಶೇಖರ ರೆಡ್ಡಿ ಅವರನ್ನು ಕರ್ನಾಟಕ ಹಾಲು ಮಹಾಮಂಡಲದ (ಕೆಎಂಎಫ್) ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುವುದು ಕಷ್ಟದ ಕೆಲಸ ಎಂದು ಸಹಕಾರ ಸಚಿವ ಬಿ.ಜೆ.ಪುಟ್ಟಸ್ವಾಮಿ ತಿಳಿಸಿದರು.
ಅವರಿಗೆ ಶಿಕ್ಷೆಯಾಗಿಲ್ಲ, ಅವರ ವಿರುದ್ಧ ವಿಚಾರಣೆ ನಡೆಯುತ್ತಿದೆ ಅಷ್ಟೇ. ವಿಚಾರಣೆಗೆ ಒಳಪಡಿಸಿದ ಮಾತ್ರಕ್ಕೆ ತಪ್ಪಿತಸ್ಥ ಆಗುವುದಿಲ್ಲ. ಅವರೇ ರಾಜೀನಾಮೆ ನೀಡದ ಹೊರತು, ವಜಾ ಮಾಡುವುದು ಸುಲಭವಲ್ಲ ಎಂದು `ಪ್ರಜಾವಾಣಿ~ಗೆ ತಿಳಿಸಿದರು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಮುಜರಾಯಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಅವರೂ ಹಿಂದೆ ಜೈಲಿಗೆ ಹೋಗಿದ್ದರು. ಆದರೆ ಅವರು ರಾಜೀನಾಮೆ ನೀಡಲಿಲ್ಲ ಎಂದು ಸಮರ್ಥಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.