ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್ ಏರೊನಾಟಿಕ್ಸ್ ಲಿ.ಗೆ (ಎಚ್‌ಎಎಲ್) ವಿಮಾನಗಳ ಎಂಜಿನ್ ಪೂರೈಕೆಯ ರೂ. 10 ಸಾವಿರ ಕೋಟಿ ವ್ಯವಹಾರದಲ್ಲಿ ಲಂಚ ಪಡೆಯಲಾಗಿದೆ ಎಂಬ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ರಕ್ಷಣಾ ಸಚಿವ ಎ.ಕೆ.ಆಂಟನಿ ಆದೇಶಿಸಿದ್ದಾರೆ.
2007ರಿಂದ 2011ರ ನಡುವಿನ ಅವಧಿಯಲ್ಲಿ ಹಾಕ್ ತರಬೇತಿ ವಿಮಾನ ಮತ್ತು ಜಾಗ್ವಾರ್ ಯುದ್ಧ ವಿಮಾನಗಳಿಗೆ ಲಂಡನ್ ಮೂಲದ ರೋಲ್ಸ್ರಾಯ್ಸ್್ ಕಂಪೆನಿಯಿಂದ ಎಂಜಿನ್ ಪೂರೈಕೆ ವ್ಯವಹಾರದಲ್ಲಿ ಈ ಲಂಚದ ಆರೋಪ ಕೇಳಿ ಬಂದಿದೆ. ಎಚ್‌ಎಎಲ್‌ನ ಜಾಗೃತ ದಳವು ಪ್ರಕರಣದ ಬಗ್ಗೆ ಆಂತರಿಕ ತನಿಖೆ ನಡೆಸಿದ್ದು, ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿವೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ಹೇಳಿವೆ.
ಪ್ರತಿಕ್ರಿಯೆ ಪಡೆಯುವುದಕ್ಕೆ ರೋಲ್ಸ್‌ರಾಯ್ಸ್ ಕಂಪೆನಿಯನ್ನು ಇಮೇಲ್ ಮೂಲಕ ಸಂಪರ್ಕಿಸಲಾಗಿದೆ. ಭಾನುವಾರ ರಜಾದಿನ ಆಗಿರುವುದರಿಂದ ಸೋಮವಾರವಷ್ಟೇ ಪ್ರತಿಕ್ರಿಯೆ ನೀಡುವುದಕ್ಕೆ ಸಾಧ್ಯ ಎಂದು ಕಂಪೆನಿ ಹೇಳಿದೆ.
ಎಂಜಿನ್ ಪೂರೈಕೆ ವ್ಯವಹಾರದಲ್ಲಿ ಗುತ್ತಿಗೆ ಪಡೆಯುವುದಕ್ಕಾಗಿ ಎಚ್‌ಎಎಲ್ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇತರ ಇಲಾಖೆಗಳಿಗೆ ಲಂಚ ನೀಡಲಾಗಿದೆ ಎಂದು ಆರೋಪಿಸಿ ಇತ್ತೀಚೆಗೆ ಎಚ್‌ಎಎಲ್‌ಗೆ ಪತ್ರವೊಂದು ಬಂದಿತ್ತು. ತಕ್ಷಣವೇ ಮುಖ್ಯ ಜಾಗೃತ ಅಧಿಕಾರಿಯಿಂದ ಎಚ್‌ಎಎಲ್ ತನಿಖೆ ನಡೆಸಿತು.
ಲಂಚ ಪಡೆದುಕೊಳ್ಳಲಾಗಿದೆ ಎಂದು ಆರೋಪಿಸಲಾಗಿರುವ 2007ರಿಂದ 2011ರ ಅವಧಿಯಲ್ಲಿ ಕಂಪೆನಿಯು ಹಲವು ಗುತ್ತಿಗೆ ನಿಯಮಗಳನ್ನು ಉಲ್ಲಂಘಿಸಿರುವುದು ಈ ತನಿಖೆಯಲ್ಲಿ ಮೇಲ್ನೋಟಕ್ಕೆ ಸಾಬೀತಾಗಿದೆ.
ಭಾರತೀಯ ವಾಯುಪಡೆಗಾಗಿ ಎಚ್‌ಎಎಲ್ ತಯಾರಿಸಿದ ವಿಮಾನಗಳಿಗೆ ಈ ಎಂಜಿನ್‌ಗಳನ್ನು ಬಳಸಲಾಗಿದೆ.
ಎಎಚ್‌ಎಲ್‌ನೊಂದಿಗೆ ಮಾಡಿಕೊಳ್ಳಬೇಕಿರುವ ಸಮಗ್ರ ಒಪ್ಪಂದದ ಅನ್ವಯ ಮಾರಾಟಗಾರರು ಮತ್ತು ಪೂರೈಕೆದಾರರು ವಹಿವಾಟಿನಲ್ಲಿ ಪ್ರಾಮಾಣಿಕತೆಯನ್ನು ಖಾತರಿಪಡಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಎಚ್‌ಎಎಲ್ ಕೆಲವು ಪ್ರಶ್ನೆಗಳನ್ನು ಕಂಪೆನಿಗಳಿಗೆ ಕಳುಹಿಸಿದ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂತು ಎಂದು ಮೂಲಗಳು ಹೇಳಿವೆ.
ಎಚ್‌ಎಎಲ್‌ನ ಮುಖ್ಯ ಜಾಗೃತ ಅಧಿಕಾರಿಯ ತನಿಖೆಯಲ್ಲಿ ಕಂಡು ಬಂದ ಅಂಶಗಳು ಮತ್ತು ಅವರ ಶಿಫಾರಸು ಆಧಾರದಲ್ಲಿ ಆಂಟನಿ ಪ್ರಕರಣವನ್ನು ಸಿಬಿಐಗೆ ವಹಿಸಿದ್ದಾರೆ.
ಭ್ರಷ್ಟಾಚಾರ ವಿರುದ್ಧ ಕಠಿಣ ಕ್ರಮ: ಈ ಬೆಳವಣಿಗೆಯಿಂದಾಗಿ ವಾಯುಪಡೆಯ ಹಲವು ಯೋಜನೆಗಳು ವಿಳಂಬವಾಗಬಹುದು. ಆದರೆ ಖರೀದಿಯಲ್ಲಿ ಭ್ರಷ್ಟಾಚಾರ ನಡೆಯಲೇಬಾರದು ಎಂಬ ನಿಲುವು ಹೊಂದಿರುವ ಆಂಟನಿ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಸೇನೆಯ ಖರೀದಿಗೆ ಸಂಬಂಧಿಸಿ ಅನಾಮಧೇಯ ಪತ್ರಗಳ ರೂಪದಲ್ಲಿ ಆರೋಪ ಕೇಳಿ ಬಂದಾಗಲೂ ರಕ್ಷಣಾ ಸಚಿವರು ತನಿಖೆಗೆ ಆದೇಶಿಸಿದ್ದಾರೆ. ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿಯಲ್ಲಿ ಅವ್ಯವಹಾರದ ಆರೋಪ ಕೇಳಿ ಬಂದಾಗ ಅವರು ಆ ವ್ಯವಹಾರವನ್ನೇ ರದ್ದುಪಡಿಸಿದ್ದರು.
ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿದ ಎಂಟು ವರ್ಷಗಳ ಅವಧಿಯಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದ ನೂರಕ್ಕೂ ಹೆಚ್ಚು ಪ್ರಕರಣಗಳನ್ನು ಆಂಟನಿ ಸಿಬಿಐ ತನಿಖೆಗೆ ಒಪ್ಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.