ADVERTISEMENT

ಲಲಿತ್‌ ಮೋದಿ ಸಂದರ್ಶನಕ್ಕೆ ಪೈಪೋಟಿ

ವಕೀಲರ ಸಲಹೆಯಂತೆ ಮಾತನಾಡಲು ನಿರಾಕರಿಸಿದ ಐಪಿಎಲ್‌ ಮಾಜಿ ಮುಖ್ಯಸ್ಥ

​ಪ್ರಜಾವಾಣಿ ವಾರ್ತೆ
Published 18 ಜೂನ್ 2015, 10:17 IST
Last Updated 18 ಜೂನ್ 2015, 10:17 IST
ಲಲಿತ್‌
ಲಲಿತ್‌   

ನವದೆಹಲಿ: ವೀಸಾ ವಿವಾದದ ಬೆನ್ನಲ್ಲಿಯೇ ಲಲಿತ್‌ ಮೋದಿ ಅವರ ಸಂದರ್ಶನ ಮಾಡುವುದಕ್ಕೆ ವಿವಿಧ ಸುದ್ದಿವಾಹಿನಿಗಳು ಪೈಪೋಟಿಗೆ ಬಿದ್ದಿವೆ.

ಈ ವಿಷಯದಲ್ಲಿ ಇಂಡಿಯಾ ಟಿ.ವಿ  ಸಲಹಾ ಸಂಪಾದಕ ರಾಜ್‌ದೀಪ್‌ ಸರ್‌ದೇಸಾಯಿ ಮೊದಲಿಗರು. ಸುಷ್ಮಾ ಸ್ವರಾಜ್‌ ಹಾಗೂ ತಮ್ಮ ನಂಟು ತುಂಬ ಹಳೆಯದು ಎಂದು  ಇಂಡಿಯಾ ಟಿ.ವಿಗೆ ನೀಡಿದ ಸಂದರ್ಶನದಲ್ಲಿ ಲಲಿತ್‌ ಹೇಳಿಕೊಂಡಿದ್ದರು. ಮೊಂಟೆನೆಗ್ರೊದಲ್ಲಿರುವ ಲಲಿತ್‌ ಅವರನ್ನು ಸಂದರ್ಶಿಸುವುದಕ್ಕೆ ಭಾರತದ ಪತ್ರಕರ್ತರು ತುದಿಗಾಲ ಮೇಲೆ ನಿಂತಿದ್ದರು. ಆದರೆ ಲಲಿತ್‌ ತಮ್ಮ ಸಂದರ್ಶನವನ್ನು ಬುಧವಾರ ರದ್ದು ಮಾಡಿದರು.

ಭಾರತದ ಮಾಧ್ಯಮಗಳ ಜತೆ ಮಾತನಾಡದಂತೆ ತಮ್ಮ ವಕೀಲರು ಸಲಹೆ ನೀಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ‘ಮಾಧ್ಯಮಗಳಿಗೆ ಸಂದರ್ಶನ ಕೊಡಬೇಡಿ. ಅವರು ನಿಜಾಂಶ ತಿರುಚುತ್ತಾರೆ ಎಂದು ನನ್ನ ವಕೀಲರು ಸಲಹೆ ನೀಡಿದ್ದಾರೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಸ್ವರಾಜ್‌ ಅವರಿಗೆ ತಾವು ದೂರವಾಣಿ ಕರೆ ಮಾಡಿದ್ದನ್ನು ಅವರು ಇಂಡಿಯಾ ಟಿ.ವಿ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದರು.
ವಸುಂಧರಾ ರಾಜೆ ಸಹಿ ಮಾಡಿರುವ ವಲಸೆ ದಾಖಲೆ ಪತ್ರದ ಮೂಲ ಪ್ರತಿ ತಮ್ಮ ಬಳಿಯೇ ಇದೆ ಎಂದೂ ಹೇಳಿಕೊಂಡಿದ್ದರು.
‘ನನ್ನ ಪತ್ನಿ ಅನಾರೋಗ್ಯಪೀಡಿತಳಾಗಿದ್ದಾಗ ಸುಷ್ಮಾ ಹಾಗೂ ರಾಜೆ ನನ್ನ ಬೆಂಬಲಕ್ಕೆ ನಿಂತಿದ್ದರು’ ಎನ್ನುವುದನ್ನೂ ಬಹಿರಂಗಪಡಿಸಿದ್ದರು.

ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆ: ತನಿಖೆ ಚುರುಕು: ಲಲಿತ್‌ ಮೋದಿ ವಿರುದ್ಧದ ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು ತನಿಖೆ ಚುರುಕುಗೊಳಿಸಿದೆ.

ಲಲಿತ್‌ ಮೋದಿ ಒಡೆತನದ್ದು ಎನ್ನಲಾದ ರಾಜಸ್ತಾನದ ಕಂಪೆನಿಗೆ   ಮಾರಿಷಸ್‌ ಮೂಲದ ಕಂಪೆನಿಯಿಂದ ಕೆಲವು ವರ್ಷಗಳ ಹಿಂದೆ ಅಕ್ರಮವಾಗಿ ₨21  ಕೋಟಿ ಹಣ ಹರಿದುಬಂದಿರುವುದಕ್ಕೆ ಸಂಬಂಧಪಟ್ಟ ಪ್ರಕರಣ ಇದಾಗಿದೆ. ಕಳೆದ ವರ್ಷ ಅಕ್ಟೋಬರ್‌ನಿಂದಲೇ ತನಿಖೆ ಶುರುವಾಗಿತ್ತು.

ಸುಷ್ಮಾ ಟ್ವೀಟ್‌ಗೆ ಸಂಪಾದಕರ ಮಂಡಳಿ ಆಕ್ಷೇಪ: ಲಲಿತ್‌ ಮೋದಿ ವೀಸಾ ವಿವಾದವನ್ನು ವರದಿ ಮಾಡಿದ ಸುದ್ದಿವಾಹಿನಿಯೊಂದರ ಪತ್ರಕರ್ತೆ ಕುರಿತಂತೆ ಸುಷ್ಮಾ ಸ್ವರಾಜ್‌ ಮಾಡಿದ ಅಪಹಾಸ್ಯಕರ ಟ್ವೀಟ್‌ಗೆ ಸಂಪಾದಕರ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ. ‘ನೋಡಿ ಎಲ್ಲರನ್ನು ಬಿಟ್ಟು ನಾವಿಕಾ ಕುಮಾರ್‌ ಈಗ ನಮಗೆ ಪ್ರಾಮಾಣಿಕತೆಯ ಪಾಠ ಮಾಡುತ್ತಿದ್ದಾರೆ’ ಎಂದು ಸುಷ್ಮಾ ಭಾನುವಾರ ಟ್ವೀಟ್‌ ಮಾಡಿದ್ದರು.

ಲಂಡನ್‌ನಲ್ಲಿ ಸುಷ್ಮಾ– ಲಲಿತ್‌ ಭೇಟಿ
ಪ್ರವಾಸಿ ಭಾರತೀಯ ದಿನಾಚರಣೆಗಾಗಿ ಕಳೆದ ಅಕ್ಟೋಬರ್‌ನಲ್ಲಿ ಇಂಗ್ಲೆಂಡ್‌ಗೆ ಅಧಿಕೃತ ಭೇಟಿ ನೀಡಿದ್ದ ಸುಷ್ಮಾ  ಸ್ವರಾಜ್‌, ತಾವು ತಂಗಿದ್ದ ಕೆನ್‌ಸಿಂಗ್‌ಟನ್ ಎಂಬ ಭಾರತೀಯ ಮೂಲದ ವ್ಯಕ್ತಿಗೆ ಸೇರಿದ ಸಣ್ಣ ಹೋಟೆಲ್‌ನಲ್ಲಿ ಅ. 17ರಂದು ರಾತ್ರಿ ಐಪಿಎಲ್‌ ಹಗರಣದ ಆರೋಪಿ ಲಲಿತ್ ಮೋದಿ ಅವರನ್ನು ಭೇಟಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಲಂಡನ್‌ನ ಪ್ರತಿಷ್ಠಿತ ಬೆಂಟ್ಲೆ ಹೋಟೆಲ್‌ನಲ್ಲಿ  ಸುಷ್ಮಾ ಹಾಗೂ ಮೋದಿ ಭೇಟಿಯಾಗಿದ್ದರು ಎಂಬ ವರದಿಯನ್ನು ಮೂಲಗಳು ತಳ್ಳಿ ಹಾಕಿವೆ. ಕೆನ್‌ಸಿಂಗ್‌ಟನ್ ಹೋಟೆಲ್‌ ಮಾಲೀಕ್‌ ಜೋಗಿಂದರ್‌ ಸ್ಯಾಂಗರ್‌  ಅವರು ಸುಷ್ಮಾ ಕುಟುಂಬದ ಸ್ನೇಹಿತ ಎನ್ನಲಾಗಿದೆ.  ಈ ವೇಳೆ ಭಾರತ ಮೂಲದ ಬ್ರಿಟನ್‌ ಸಂಸದ ಕೀತ್ ವಾಜ್ ಅವರನ್ನು ಸುಷ್ಮಾ ಭೇಟಿಯಾಗಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.  ಆದರೆ, ಅದಾದ ನಂತರ ಮೂರು ಬಾರಿ ಕೀತ್‌ ವಾಜ್‌ ಅವರನ್ನು ಸುಷ್ಮಾ ಭೇಟಿಯಾಗಿದ್ದರು ಎನ್ನಲಾಗಿದೆ.

ಲಲಿತ್‌ ಮೋದಿ, ವಸುಂಧರಾ ರಾಜೇ ಸಿಂಧ್ಯಾ ಪುತ್ರನಿಗೂ ಕೋಟ್ಯಂತರ ರೂಪಾಯಿ ಸಾಲ ನೀಡಿದ್ದಾರೆ.   ಆದರೆ, ರಾಜೇ ಬೆನ್ನಿಗೆ ನಿಲ್ಲಲು ಹಿಂದೇಟು ಹಾಕಿರುವ ಬಿಜೆಪಿ, ಸುಷ್ಮಾ ಬೆನ್ನಿಗೆ ಬಲವಾಗಿ ನಿಂತಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT