ADVERTISEMENT

ಲೇಖಕಿ ಹತ್ಯೆಗೆ ತೀವ್ರ ಖಂಡನೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 10:23 IST
Last Updated 6 ಸೆಪ್ಟೆಂಬರ್ 2013, 10:23 IST

ನವದೆಹಲಿ (ಪಿಟಿಐ) : ಭಾರತೀಯ ಮೂಲದ ಲೇಖಕಿ ಸುಷ್ಮಿತಾ ಬ್ಯಾನರ್ಜಿ ಅವರ ಹತ್ಯೆಗೆ ಭಾರತದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದ್ದು, ಹತ್ಯೆಯ ತನಿಖೆ ನಡೆಸುವಂತೆ ಅಫ್ಘಾನಿಸ್ತಾನ ಸರ್ಕಾರಕ್ಕೆ ಒತ್ತಾಯ ಪಡಿಸುವುದಾಗಿ ಸರ್ಕಾರ ತಿಳಿಸಿದೆ.

ಲೇಖಕಿ ಹತ್ಯೆಗೆ ರಾಜ್ಯಸಭೆಯಲ್ಲಿ ಶುಕ್ರವಾರ ಸದಸ್ಯರು ಸರ್ವಾನುಮತದ ಖಂಡನೆ ವ್ಯಕ್ತಪಡಿಸಿದರು. ತೃಣಮೂಲ ಕಾಂಗ್ರೆಸ್ ಪಕ್ಷದ ಸದಸ್ಯ ಕುನಾಲ್ ಕುಮಾರ್ ಘೋಷ್ ಅವರು ಲೇಖಕಿಯ ಹತ್ಯೆ ಕುರಿತಾಗಿ ವಿಷಯ ಪ್ರಸ್ತಾಪಿಸಿದರು.

ಈ ವೇಳೆ ಮಾತನಾಡಿದ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ರಾಜೀವ್ ಶುಕ್ಲಾ ಅವರು, ಲೇಖಕಿ ಹತ್ಯೆಗೆ ಸಂಬಂಧಿಸಿದ ಮಾಹಿತಿ ಕಲೆಹಾಕುತ್ತಿದ್ದು  ಅಫ್ಘಾನಿಸ್ತಾನ ಸರ್ಕಾರದ ಜತೆ ಮಾತುಕತೆ ನಡೆಸುತ್ತೇವೆ ಎಂದು ತಿಳಿಸಿದರು.

ಪ್ರತಿಯಾಗಿ ಮಾತನಾಡಿದ ಸಿಪಿಐ ಸದಸ್ಯ ಡಿ. ರಾಜಾ ಅವರು 'ಈ ಮೊದಲು ಅಫ್ಘಾನ್‌ನಲ್ಲಿ ಭಾರತೀಯ ರಾಯಭಾರಿ ಕಚೇರಿ ಮೇಲೆ ದಾಳಿ ನಡೆಸಲಾಗಿತ್ತು. ಇದೀಗ ಉಗ್ರರಿಂದ ಲೇಖಕಿಯ ಹತ್ಯೆಯಾಗಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರು. ಘಟನೆ ಕುರಿತು ಪ್ರತಿಕ್ರಿಯೆ ನೀಡುವಂತೆ ಎಸ್‌ಪಿ ಸದಸ್ಯೆ ಜಯಾ ಬಚ್ಚನ್ ಸಹ ವಿದೇಶಾಂಗ ಸಚಿವಾಲಯವನ್ನು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT