ADVERTISEMENT

ಲೈಂಗಿಕ ದೌರ್ಜನ್ಯ: ತ್ವರಿತ ತನಿಖೆಗೆ ಘಟಕ ಸ್ಥಾಪಿಸಿ

ರಾಜ್ಯ ಸರ್ಕಾರ, ಕೇಂದ್ರಾಡಳಿತ ಪ್ರದೇಶಗಳಿಗೆ ಮೇನಕಾ ಗಾಂಧಿ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2018, 19:30 IST
Last Updated 19 ಏಪ್ರಿಲ್ 2018, 19:30 IST
ಮೇನಕಾ ಗಾಂಧಿ
ಮೇನಕಾ ಗಾಂಧಿ   

ನವದೆಹಲಿ: ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ‘ತ್ವರಿತ ಮತ್ತು ಕಾಲಮಿತಿಯೊಳಗೆ ವೃತ್ತಿಪರವಾಗಿ ತನಿಖೆ’ ಮಾಡಲು ವಿಶೇಷ ಘಟಕ ಸ್ಥಾಪನೆ ಮಾಡಬೇಕು ಎಂದು ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಹೇಳಿದ್ದಾರೆ.

ಕಠುವಾದಲ್ಲಿ ಎಂಟು ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ–ಹತ್ಯೆ, ಬಿಜೆಪಿ ಶಾಸಕ ಆರೋಪಿಯಾಗಿರುವ ಉನ್ನಾವ್ ಅತ್ಯಾಚಾರ ಸೇರಿದಂತೆ ಈಚೆಗೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿರುದ್ಧ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿರುವ ಸಮಯದಲ್ಲಿಯೇ ಮೇನಕಾ ಅವರು ಈ ವಿಷಯ ಪ್ರಸ್ತಾಪ
ಮಾಡಿದ್ದಾರೆ.  

ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಸ್ಥರಿಗ ಪತ್ರ ಬರೆದಿರುವ ಅವರು, ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆಗೆ ಅಡ್ಡಿ ಮಾಡುತ್ತಿರುವ ಅಥವಾ ಅಪರಾಧದ ಸಂಚುಕೋರರ ಜತೆಗೆ ‘ಭಾಗಿಯಾಗುವ’ ಪೊಲೀಸ್ ಅಧಿಕಾರಿಗಳ ವಿರುದ್ಧ ‘ಕಠಿಣ ಕ್ರಮ’ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ADVERTISEMENT

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಂಗ್ರಹಿಸಲಾದ ಸಾಕ್ಷ್ಯಗಳನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷಿಸಲು ರಾಜ್ಯಗಳಲ್ಲಿ ಇಂತಹ ಪ್ರಯೋಗಾಲಯಗಳನ್ನು ಸ್ಥಾಪಿಸಲು ನೆರವು ನೀಡುವುದಾಗಿಯೂ ಅವರು ಹೇಳಿದ್ದಾರೆ.

‘ನಿರೀಕ್ಷಣಾ ಜಾಮೀನು ಸೂಕ್ತವಲ್ಲ’
ನವದೆಹಲಿ (ಪಿಟಿಐ):
ಸಮಾಜ ಸೇವೆ ಮೂಲಕ ಪ್ರಾಯಶ್ಚಿತ್ತ ಮಾಡುವುದಾಗಿ ಹೇಳಿ ಜಾಮೀನು ಪಡೆದುಕೊಂಡಿದ್ದ ಅತ್ಯಾಚಾರ ಪ್ರಕರಣವೊಂದರ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ದೆಹಲಿ ಹೈಕೋರ್ಟ್ ರದ್ದುಪಡಿಸಿದೆ.

ಆರೋಪಿ ಬಿಡುಗಡೆಗೆ ಅರ್ಹನಲ್ಲ ಎಂದು ನ್ಯಾಯಾಲಯ ತೀರ್ಮಾನಕ್ಕೆ ಬಂದಿತ್ತು. ಆದರೆ, ‘ಬಡಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಮಾಜ ಸೇವೆ ಮಾಡುತ್ತೇನೆ’ ಎಂದು ಹೇಳಿದ್ದರಿಂದ ಆತನಿಗೆ ನಿರೀಕ್ಷಣಾ ಜಾಮೀನು ನೀಡಿದ್ದು ಸೂಕ್ತವಲ್ಲ ಎಂದು ನ್ಯಾಯಮೂರ್ತಿ ಸಂಜೀವ್ ಸಚ್‌ದೇವ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.