ADVERTISEMENT

ಲೋಕಪಾಲ್ ಮಸೂದೆ: ಕರಡು ಸಮಿತಿಯಲ್ಲಿ ಭಾರಿ ಭಿನ್ನಮತ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 19:30 IST
Last Updated 11 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ಲೋಕಪಾಲ್ ಮಸೂದೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವರು ಹಾಗೂ ಅಣ್ಣಾ ತಂಡದ ಸದಸ್ಯರ ಮಧ್ಯೆ ಭಾರಿ ಭಿನ್ನಾಭಿಪ್ರಾಯ ಇತ್ತು ಎನ್ನುವುದು ಇದೀಗ ಅಧಿಕೃತವಾಗಿ ಬಹಿರಂಗಗೊಂಡಿದೆ.

ಅಣ್ಣಾ ತಂಡದ ಐವರು ಸದಸ್ಯರು ಹಾಗೂ ಅಷ್ಟೇ ಸಂಖ್ಯೆಯ ಸಂಪುಟ ಸಚಿವರನ್ನು ಒಳಗೊಂಡ  ಜಂಟಿ ಕರಡು ಸಮಿತಿಯು ಮಸೂದೆಗೆ ಸಂಬಂಧಿಸಿದಂತೆ ನಡೆಸಿದ ಚರ್ಚೆಯ ವಿವರ ಕೇಳಿ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಲಾಗಿತ್ತು.

ಉದ್ದೇಶಿತ ಲೋಕಪಾಲ್ ಮಸೂದೆಯ ಸ್ವರೂಪ ಹಾಗೂ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದಂತೆ ನಡೆಸಿದ ಸಮಾಲೋಚನೆಯಲ್ಲಿ ಕೇಂದ್ರ ಸಚಿವರು ಹಾಗೂ ಅಣ್ಣಾ ತಂಡದ ಮಧ್ಯೆ ಭಿನ್ನಾಭಿಪ್ರಾಯ ಇತ್ತು ಎಂದು ಈ ಅರ್ಜಿಗೆ ಪ್ರತಿಕ್ರಿಯಿಸಲಾಗಿದೆ.

ಆದರೆ ಇದನ್ನು ನಿರಾಕರಿಸಿರುವ ಅಣ್ಣಾ ತಂಡದ ಸದಸ್ಯ ಅರವಿಂದ್ ಕೇಜ್ರಿವಾಲ್, `ಅಂಥದ್ದೇನೂ ಭಿನ್ನಾಭಿಪ್ರಾಯ ಇರಲಿಲ್ಲ~ ಎಂದು ಸಮರ್ಥನೆ ನೀಡಿದ್ದಾರೆ. ಮಸೂದೆಯ ರಚನೆ ಹಾಗೂ ಅಧಿಕಾರ ವ್ಯಾಪ್ತಿಯ ಜತೆಗೆ ಇನ್ನಿತರ ವಿಷಯಗಳ ಬಗೆಗಿನ ಚರ್ಚೆಯ ವಿವರ ಒಳಗೊಂಡ 9 ಭಾಗಗಳ ಸಿ.ಡಿಯನ್ನು ಬಹಿರಂಗಗೊಳಿಸಲಾಗಿದೆ.

`ಸಾಮಾನ್ಯ ವ್ಯಕ್ತಿಯೊಬ್ಬ ತಳಮಟ್ಟದಲ್ಲಿ ನಡೆಯುವ ಭ್ರಷ್ಟಾಚಾರಕ್ಕೆ ಪುರಾವೆ ಪಡೆಯಲು ಎಲ್ಲಿ ಹೋಗಬೇಕು?~ ಎಂದು ಒಂದು ಹಂತದಲ್ಲಿ ಅಣ್ಣಾ ಪ್ರಶ್ನಿಸಿದ್ದರು.

`ಎ~ ಶ್ರೇಣಿ ಅಧಿಕಾರಿಗಳನ್ನು ಮಾತ್ರವೇ ಮಸೂದೆ ವ್ಯಾಪ್ತಿಗೆ ತರಬೇಕು ಎಂದು ಸರ್ಕಾರ ಪ್ರಸ್ತಾಪಿಸಿದ್ದು, ಅಣ್ಣಾ ತಂಡವು ಇಡೀ ಆಡಳಿತ ವರ್ಗವನ್ನು ಇದರ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಪಟ್ಟು ಹಿಡಿದಿದ್ದು-ಇವೇ ಮುಂತಾದ ಅಂಶಗಳನ್ನು ಸಿ.ಡಿ ಒಳಗೊಂಡಿದೆ.

ಲೋಕಪಾಲ್ ವ್ಯಾಪ್ತಿಯಲ್ಲಿ ಭ್ರಷ್ಟಾಚಾರ ನಿಗ್ರಹಕ್ಕೆ ಸಂಬಂಧಪಟ್ಟ ವಿಷಯದಲ್ಲಿ ವಕೀಲ ಪ್ರಶಾಂತ್ ಭೂಷಣ್ ನಾಲ್ಕು ಸ್ತರಗಳ ಕಾರ್ಯವಿಧಾನವನ್ನು ಸೂಚಿಸಿದ್ದರು. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳನ್ನು ಆಲಿಸಲು ಪ್ರತ್ಯೇಕ ಪ್ರಾಧಿಕಾರ ರಚನೆ ಪ್ರಸ್ತಾವವೂ  ಅದರಲ್ಲಿ ಅಡಕವಾಗಿತ್ತು.

ಒಟ್ಟಾರೆ ಜಂಟಿ ಕ್ರಿಯಾ ಸಮಿತಿಯಲ್ಲಿ ಲೋಕಪಾಲ್ ಮಸೂದೆಗೆ ಸಂಬಂಧಿಸಿದಂತೆ ತೀವ್ರ ಭಿನ್ನಾಭಿಪ್ರಾಯ ಇತ್ತು ಎನ್ನುವುದನ್ನು ಈ ಸಿ.ಡಿ ಬಹಿರಂಗಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.