ADVERTISEMENT

ವಂತಿಗೆ ಶುಲ್ಕ ಕಾನೂನುಬಾಹಿರ

ಖಾಸಗಿ ಕಾಲೇಜುಗಳ ವಿರುದ್ಧ `ಸುಪ್ರೀಂ' ಮತ್ತೆ ಕಿಡಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2013, 19:59 IST
Last Updated 8 ಸೆಪ್ಟೆಂಬರ್ 2013, 19:59 IST
ವಂತಿಗೆ ಶುಲ್ಕ ಕಾನೂನುಬಾಹಿರ
ವಂತಿಗೆ ಶುಲ್ಕ ಕಾನೂನುಬಾಹಿರ   

ನವದೆಹಲಿ (ಪಿಟಿಐ): ಖಾಸಗಿ ತಾಂತ್ರಿಕ ಹಾಗೂ ವೈದ್ಯಕೀಯ ಕಾಲೇಜುಗಳು ವಿದ್ಯಾರ್ಥಿಗಳಿಂದ ವಂತಿಗೆ (ಕ್ಯಾಪಿಟೇಷನ್) ಶುಲ್ಕ ಸಂಗ್ರಹ ಮಾಡುವುದರ ವಿರುದ್ಧ ಕಿಡಿಕಾರಿರುವ ಸುಪ್ರೀಂಕೋರ್ಟ್, ಇದು `ಅಕ್ರಮ' ಹಾಗೂ `ಅನೈತಿಕ' ಎಂದು ಹೇಳಿದ್ದು ಇಂತಹ ವ್ಯವಸ್ಥೆಗೆ ಕೊನೆಹೇಳಲು ಕೇಂದ್ರ ಸರ್ಕಾರ ಅಗತ್ಯ ಕಾನೂನುಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದೆ.

ಕ್ಯಾಪಿಟೇಷನ್ ಶುಲ್ಕದಿಂದಾಗಿ ಅನೇಕ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಕಾಲೇಜುಗಳಲ್ಲಿ ಪ್ರವೇಶ ಪಡೆಯುವುದರಿಂದ ವಂಚಿತರಾಗುತ್ತಾರೆ ಎಂದೂ  ಕಳವಳ ವ್ಯಕ್ತಪಡಿಸಿದೆ.
`ಎಂಬಿಬಿಎಸ್ ಹಾಗೂ ಸ್ನಾತಕೋತ್ತರ ಸೀಟುಗಳನ್ನು ಹಂಚಿಕೆ ಮಾಡುವಾಗ ವಂತಿಗೆ ರೂಪದಲ್ಲಿ ಭಾರಿ ಮೊತ್ತವನ್ನು ಪಡೆಯಲಾಗುತ್ತಿದ್ದು ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಪ್ರವೇಶದಿಂದ ವಂಚಿತರಾಗುತ್ತಾರೆ.

ಅಧಿಕ ಮೊತ್ತದ ಆಸೆಗಾಗಿ ಹಲವು ಸಂಸ್ಥೆಗಳು ನಿಗದಿತ ಸಂಖ್ಯೆಗಿಂತ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಿವೆ. ಇದು ವಿದ್ಯಾರ್ಥಿಗಳ ಕಲ್ಯಾಣಕ್ಕಿಂತ ಆಯಾ ಸಂಸ್ಥೆಗಳ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತಿದೆ' ಎಂದು ನ್ಯಾಯಮೂರ್ತಿಗಳಾದ ಕೆ.ಎಸ್. ರಾಧಾಕೃಷ್ಣನ್ ಹಾಗೂ ಎ.ಕೆ. ಸಿಕ್ರಿ ಅವರನ್ನು ಒಳಗೊಂಡ ಪೀಠ ಹೇಳಿದೆ.

ವೈದ್ಯಕೀಯ, ಎಂಜಿನಿಯರಿಂಗ್, ನರ್ಸಿಂಗ್ ಹಾಗೂ ಔಷಧ ವಿಜ್ಞಾನ ಕಾಲೇಜುಗಳಲ್ಲಿಯ ಶಿಕ್ಷಣದ ಗುಣಮಟ್ಟ ಕುಸಿಯಲು ಕ್ಯಾಪಿಟೇಷನ್ ಶುಲ್ಕವೇ ಕಾರಣವಾಗಿದೆ. ವಿಶೇಷವಾಗಿ ವೈದ್ಯಕೀಯ ವಿಭಾಗದಲ್ಲಂತೂ ಪರಿಸ್ಥಿತಿ `ಗಂಭೀರ'ವಾಗಿದ್ದು ಈ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT