ADVERTISEMENT

ವಕೀಲರ ಪ್ರತಿಭಟನೆ; 2 ಜಿ ವಿಚಾರಣೆಗೆ ಭಂಗ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 19:30 IST
Last Updated 12 ಜನವರಿ 2012, 19:30 IST

ನವದೆಹಲಿ (ಪಿಟಿಐ): ಆಸ್ತಿ ವ್ಯಾಜ್ಯ ವಿಚಾರಣೆಗೆ ಜಿಲ್ಲಾ ನ್ಯಾಯಾಲಯಗಳಿಗೆ ನಿಗದಿ ಮಾಡಿರುವ ಮೌಲ್ಯದ ಮಿತಿಯನ್ನು ಸಡಿಲಿಸಬೇಕೆಂದು ಒತ್ತಾಯಿಸಿ ವಕೀಲರು ಗುರುವಾರ ಹೈಕೋರ್ಟ್‌ನಲ್ಲಿ ಪ್ರತಿಭಟನೆ ನಡೆಸಿದ್ದರಿಂದ, 2 ಜಿ ಹಗರಣದ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.

ಪ್ರಾಸಿಕ್ಯೂಷನ್ ಪರ ಸಾಕ್ಷಿಯಾಗಿರುವ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ಅಧಿಕಾರಿ ತರುಣ್ ದಾಸ್ ಅವರ ಹೇಳಿಕೆ ಪಡೆಯಲು ಆರಂಭಿಸುತ್ತಿದ್ದಂತೆ ಪ್ರತಿಭಟನಾಕಾರರು ವಿಚಾರಣಾ ಕೊಠಡಿಗೆ ನುಗ್ಗಿದರು.

`2 ಜಿ ವಿಚಾರಣೆ ಪ್ರತಿದಿನ ನಡೆಯುತ್ತಿದೆ. ಇದು ಒಂದು ದಿನ ನಿಂತರೆ ನಷ್ಟವೇನೂ ಇಲ್ಲ. ಆದರೆ ನಾವು ನಿಮ್ಮೆಲರ (ವಕೀಲರ) ಪರವಾಗಿ ಹೋರಾಡುತ್ತಿದ್ದೇವೆ. ಆದ್ದರಿಂದ ಎಲ್ಲರೂ ವಿಚಾರಣಾ ಕೊಠಡಿಯಿಂದ ಹೊರಬನ್ನಿ~ ಎಂದು ದೆಹಲಿ ವಕೀಲರ ಸಂಘದ ಕಾರ್ಯದರ್ಶಿ ಸುನಿಲ್ ಚೌಧರಿ ಕರೆ ನೀಡಿದರು.

ADVERTISEMENT

ಪ್ರತಿಭಟನಾಕಾರರ ಧ್ವನಿ ಜೋರಾಗಿ ಮೂರು ಬಾರಿ ವಿಚಾರಣೆಗೆ ತಡೆಯೊಡ್ಡಿದ ನಂತರ ಸಿಬಿಐ ವಿಶೇಷ ನ್ಯಾಯಾಧೀಶ ಒ.ಪಿ.ಸೈನಿ ಕಲಾಪ ಸ್ಥಗಿತಗೊಳಿಸಿದರು.

ವಕೀಲರ ಸಂಘಗಳ ಸಮನ್ವಯ ಸಮಿತಿಯ ವಕ್ತಾರ ರಾಜೀವ್ ಖೋಸ್ಲಾ ನಂತರ ಮಾತನಾಡಿ, ಪ್ರತಿಭಟನೆ ಸಂಪೂರ್ಣ ಯಶಸ್ವಿಯಾಗಿದೆ ಎಂದು ತಿಳಿಸಿದರು.

ಪ್ರಸ್ತುತ 20 ಲಕ್ಷ ರೂಪಾಯಿಗಿಂತ ಕಡಿಮೆ ಮೌಲ್ಯದ ಆಸ್ತಿ ವ್ಯಾಜ್ಯಗಳ ವಿಚಾರಣೆ ಮಾತ್ರ ಜಿಲ್ಲಾ ನ್ಯಾಯಾಲಯಗಳಲ್ಲಿ ನಡೆಯುತ್ತದೆ. ಅದಕ್ಕೆ ಮೀರಿದ ಪ್ರಕರಣಗಳ ವಿಚಾರಣೆ ಹೈಕೋರ್ಟ್ ವ್ಯಾಪ್ತಿಗೆ ಬರುತ್ತಿದೆ. ಆದರೆ ಶೇ 95ರಷ್ಟು ಪ್ರಕರಣಗಳಲ್ಲಿ ಆಸ್ತಿ ಮೌಲ್ಯ 20 ಲಕ್ಷ ರೂಪಾಯಿಗಿಂತ ಜಾಸ್ತಿ ಇರುವುದರಿಂದ ಜಿಲ್ಲಾ ಕೋರ್ಟ್‌ಗಳ ವಕೀಲರಿಗೆ ಭಾರಿ ಅನ್ಯಾಯವಾಗುತ್ತದೆ. ಎಲ್ಲದಕ್ಕೂ ಹೈಕೋರ್ಟ್‌ಗೆ ಹೋಗಲು ಕಕ್ಷಿದಾರರಿಗೆ ಕೂಡ ಕಷ್ಟವಾಗುತ್ತದೆ ಎಂದು ಪ್ರತಿಭಟನಾಕಾರರು ದೂರಿದರು.

ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆಗೆ ಸರಾಸರಿ 10ರಿಂದ 12 ವರ್ಷಗಳು ಬೇಕಾಗುತ್ತದೆ. ಆದರೆ ಜಿಲ್ಲಾ ನ್ಯಾಯಾಲಯದಲ್ಲಿ ಎರಡರಿಂದ ಮೂರು ವರ್ಷದೊಳಗೆ ಪ್ರಕರಣ ಇತ್ಯರ್ಥವಾಗುತ್ತದೆ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.