ADVERTISEMENT

ವರಿಷ್ಠರ ಸಭೆಯಲ್ಲಿ ಪ್ರಿಯಾಂಕಾ!

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 19:30 IST
Last Updated 7 ಜನವರಿ 2014, 19:30 IST

ನವದೆಹಲಿ (ಪಿಟಿಐ): ಸೋನಿಯಾ ಗಾಂಧಿ ಪುತ್ರಿ  ಪ್ರಿಯಾಂಕಾ ಗಾಂಧಿ ವಾದ್ರಾ ಸಕ್ರಿಯ ರಾಜಕಾರಣಕ್ಕೆ ಧುಮುಕುವರೇ?
ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ನಿವಾ­ಸದಲ್ಲಿ ಮಂಗಳವಾರ ನಡೆದ ಪಕ್ಷದ ಪ್ರಮುಖ ಮುಖಂಡರ ಸಭೆ, ಇಂಥದ್ದೊಂದು ಅನುಮಾನಕ್ಕೆ ಪುಷ್ಟಿ ನೀಡುವಂತಿತ್ತು. ಆದರೆ, ಸಭೆಯಲ್ಲಿ ರಾಹುಲ್‌ ಇದ್ದರೇ ಎನ್ನುವುದು ಮಾತ್ರ ಸ್ಪಷ್ಟವಾಗಿಲ್ಲ. ಈ ಬಗ್ಗೆ ಪಕ್ಷದ ಮೂಲಗಳು ಕೂಡ ಬಾಯಿಬಿಟ್ಟಿಲ್ಲ.

ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹ್ಮದ್‌ ಪಟೇಲ್‌, ಕೇಂದ್ರ ಸಚಿವ ಜೈರಾಮ್‌ ರಮೇಶ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮಧು­ಸೂದನ್‌ ಮಿಸ್ತ್ರಿ, ಜನಾರ್ದನ ದ್ವಿವೇದಿ, ಅಜಯ್‌ ಮಾಕನ್‌,  ಮೋಹನ್‌ ಗೋಪಾಲ್‌ ಮತ್ತಿ­ತರರು ಸಮಾಲೋಚನೆಯಲ್ಲಿ ತೊಡಗಿದ್ದರು. ಆಗ ಏಕಾಏಕಿ ಬಂದ ಪ್ರಿಯಾಂಕ ಸುಮಾರು ಐದು ನಿಮಿಷಗಳ ಕಾಲ ಅಲ್ಲಿಯೇ ಇದ್ದರು.

ಪ್ರಿಯಾಂಕಾ, ರಾಯಬರೇಲಿ ಹಾಗೂ ಅಮೇಥಿ­ಯಲ್ಲಿ  ಚುನಾವಣಾ ಪ್ರಚಾರ ಕಾರ್ಯದ ಹೊಣೆ ಹೊತ್ತಿ­ರುವುದು ಎಲ್ಲರಿಗೂ ಗೊತ್ತೇ ಇರುವ ವಿಷಯ. ಆದರೆ ಮಂಗಳವಾರ ನಡೆದ ಬೆಳವಣಿಗೆ ರಾಜಕೀಯ ವಲಯದಲ್ಲಿ ಹಲವು ಅನುಮಾ­ನ­ಗಳನ್ನು ಬಿತ್ತಿರು­ವುದು ಸುಳ್ಳಲ್ಲ. ಇದೇ ತಿಂಗಳು 17ರಂದು ನಡೆ­ಯ­ಲಿರುವ ಎಐಸಿಸಿ ಸಭೆಯಲ್ಲಿ ಕಾಂಗ್ರೆಸ್‌ ಪಕ್ಷವು ತನ್ನ ಪ್ರಧಾನಿ ಅಭ್ಯರ್ಥಿಯನ್ನು ಅಧಿಕೃತವಾಗಿ ಘೋಷಿಸಲು ಹೊರಟಿದೆ. ಇದರ ಬೆನ್ನಲ್ಲಿಯೇ  ಸಭೆ ನಡೆದಿರುವುದು ಮಹತ್ವದ್ದಾಗಿದೆ.

‘ರಾಹುಲ್‌, ಪಕ್ಷದ ಅಧ್ಯಕ್ಷರಾಗುತ್ತಾರೆ, ಪ್ರಿಯಾಂಕಾ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸುವ ಸಾಧ್ಯತೆ ಇದೆ’ ಎಂಬ ಮಾತು ಕೂಡ ಕೇಳಿಬಂದಿದೆ. ಆದರೆ ಇದು ‘ಹುಚ್ಚು ಕಲ್ಪನೆ’ ಎನ್ನುತ್ತಾರೆ ಕಾಂಗ್ರೆಸ್‌ ಮುಖಂಡರೊಬ್ಬರು.

ಹಾಗೆ ನೋಡಿದರೆ, ಪ್ರಿಯಾಂಕಾ, ಸಕ್ರಿಯ ರಾಜಕಾ­ರಣದಲ್ಲಿ ತೊಡಗುವ ಕುರಿತು ವದಂತಿ ಹಬ್ಬಿರುವುದು ಇದು  ಮೊದಲಲ್ಲ. ದಶಕದ ಹಿಂದೆಯೂ ಈ ಮಾತು ಕೇಳಿ ಬಂದಿತ್ತು. ಹಿಂದೆ ರಾಜೀವ್‌ ಗಾಂಧಿ ಪ್ರತಿನಿಧಿಸಿದ್ದ ಅಮೇಥಿ ಕ್ಷೇತ್ರದಿಂದ ಪ್ರಿಯಾಂಕಾ ಸ್ಪರ್ಧಿಸುತ್ತಾರೆ ಎಂದು ಆಗ ಹೇಳಲಾಗಿತ್ತು. ಕೊನೆಗೆ ರಾಹುಲ್‌ ಅಲ್ಲಿಂದ ಆಯ್ಕೆಯಾದರು.  2012ರಲ್ಲಿ ಸೋನಿಯಾ ಅವರು ಶಸ್ತ್ರಚಿಕಿತ್ಸೆಗೆ ಒಳಪಟ್ಟಾಗ ಕೂಡ ಪ್ರಿಯಾಂಕಾಬಗ್ಗೆ ಇಂಥದ್ದೇ ವದಂತಿ ಕೇಳಿ ಬಂದಿತ್ತು.

ಉತ್ತಮ ಬೆಳವಣಿಗೆ: ಇತ್ತೀಚೆಗಿನ ವಿಧಾನಸಭೆ ಚುನಾ­ವಣೆಯಲ್ಲಿ ಸೋಲು ಕಂಡಿರುವ ಕಾಂಗ್ರೆಸ್‌ಗೆ ಮೋದಿ ಹಾಗೂ ಆಮ್‌್ ಆದ್ಮಿ ಪಕ್ಷದ ಅಲೆ ಹೊಡೆತ ನೀಡು­ತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಪಕ್ಷದ ವ್ಯವ­­ಹಾರಗಳಲ್ಲಿ ಪ್ರಿಯಾಂಕಾ ಆಸಕ್ತಿ ತೋರಿ­ಸುತ್ತಿ­ರು­ವುದು ಒಳ್ಳೆಯ ಬೆಳವಣಿಗೆ ಎನ್ನುವುದು ಹಿರಿಯ ಮುಖಂಡರ ತರ್ಕ.

ಅಪಾರ್ಥ ಬೇಡ: ‘ರಾಹುಲ್‌ ನಿವಾಸದಲ್ಲಿ ನಡೆದ ಸಭೆಯಲ್ಲಿ ಪ್ರಿಯಾಂಕಾ ಕಾಣಿಸಿಕೊಂಡಿದ್ದಕ್ಕೆ  ಬೇರೆ ಅರ್ಥ ಕಲ್ಪಿಸುವುದು ಬೇಡ’ ಎನ್ನುತ್ತವೆ ಮೂಲಗಳು.

‘ಮುಂಬರುವ ದಿನಗಳಲ್ಲಿ ಸೋನಿಯಾ ಹಾಗೂ ರಾಹುಲ್‌ ಪ್ರವಾಸದ ಕುರಿತು ಚರ್ಚಿಸುವುದು ಈ ಸಭೆಯ ಉದ್ದೇಶವಾಗಿತ್ತು. ಅಲ್ಲಿಗೆ ಪ್ರಿಯಾಂಕಾ ಅಚಾ­­ನಕ್‌ ಆಗಿ ಬಂದರು ಅಷ್ಟೆ. ಇದಕ್ಕೆ ಬಣ್ಣ ಹಚ್ಚು­ವುದು ಬೇಡ’ ಎಂದು  ಹೆಸರು ಬಹಿರಂಗ­ಪಡಿಸಲು  ಬಯಸದ ಮುಖಂಡರೊಬ್ಬರು ಹೇಳಿದ್ದಾರೆ.

‘ರಾಜಕೀಯ ವಿಷಯಗಳಿಗೆ ಸಂಬಂಧಿಸಿ ಪ್ರಿಯಾಂಕಾ ತಮ್ಮದೇ ಅಭಿಪ್ರಾಯ ಹೊಂದಿದ್ದಾರೆ. ಈ ಬಗ್ಗೆ ಪಕ್ಷದ ಕಾರ್ಯಕರ್ತರ ಜತೆ ಮಾತ­ನಾ­ಡುತ್ತಲೇ ಇರುತ್ತಾರೆ. ಇದರಲ್ಲಿ ಅಚ್ಚರಿ­ಪ­ಡು­ವುದು ಏನೂ ಇಲ್ಲ’ ಎಂದು ದ್ವಿವೇದಿ ಸಮರ್ಥನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.