ನವದೆಹಲಿ: ಆಗಸ್ಟಾವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ವಾಯುಪಡೆ ಮಾಜಿ ಮುಖ್ಯಸ್ಥ ಎಸ್.ಪಿ.ತ್ಯಾಗಿ ₹362 ಕೋಟಿ ಲಂಚ ಪಡೆದಿದ್ದಾರೆ ಎಂದು ಸಿಬಿಐ ಹೇಳಿದೆ. ಆಗಸ್ಟಾವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಈ ವಿಷಯ ಉಲ್ಲೇಖಿಸಲಾಗಿದೆ ಎಂದು ಇಂಡಿಯಾ ಟುಡೇ ಟಿವಿ ವರದಿ ಮಾಡಿದೆ.
₹362 ಕೋಟಿ ವ್ಯವಹಾರ ನಡೆಸುವ ಸಂಚು ನಡೆಸಿ ಅದಕ್ಕೆ ತ್ಯಾಗಿ ನೇತೃತ್ವ ನೀಡಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ. ಈ ಸಂಚಿನಲ್ಲಿ ಆಗ ಏರ್ ಮಾರ್ಷಲ್ ಆಗಿದ್ದ ಜೆ ಎಸ್ ಗುಜರಾಲ್ ಕೂಡಾ ಭಾಗಿಯಾಗಿದ್ದರು ಎಂದು ಸಿಬಿಐ ಹೇಳಿದೆ. ಇಟೆಲಿಯ ಮಧ್ಯವರ್ತಿ ಕಾರ್ಲೊ ಗೆರೊಸಾ, ಕ್ರಿಶ್ಚಿಯನ್ ಮೈಕೆಲ್, ಗೈಡೊ ಹಶ್ಕೆ ಸೇರಿದಂತೆ ಆಗಸ್ಟಾವೆಸ್ಟ್ಲ್ಯಾಂಡ್ನ ಅಧಿಕಾರಿಗಳು ಕೂಡಾ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ.
ಅತಿಗಣ್ಯರ ಬಳಕೆಗಾಗಿ 12 ಹೆಲಿಕಾಪ್ಟರ್ಗಳನ್ನು ಖರೀದಿಸುವ ವಾಯುಪಡೆ ಯೋಜನೆಯಲ್ಲಿ ಆಗಸ್ಟಾವೆಸ್ಟ್ಲ್ಯಾಂಡ್, ತನ್ನ ಜತೆ ವ್ಯವಹಾರ ಕುದುರಿಸಲು ಆಗ ವಾಯುಪಡೆ ಮುಖ್ಯಸ್ಥರಾಗಿದ್ದ ಎಸ್.ಪಿ.ತ್ಯಾಗಿ ಹಾಗೂ ಅವರ ಸಂಬಂಧಿಗಳಿಗೆ ಮಧ್ಯವರ್ತಿಗಳ ಮೂಲಕ 362 ಕೋಟಿ ಲಂಚ ನೀಡಿದ್ದಾರೆ ಎಂಬುದು ತ್ಯಾಗಿ ಮೇಲಿರುವ ಆರೋಪ.
2005ರಲ್ಲಿ ನಡೆದ ಸಭೆಯಲ್ಲಿ, ಹೆಲಿಕಾಪ್ಟರ್ಗಳು ಹಾರಾಡುವ ಗರಿಷ್ಠ ಎತ್ತರದ ಮಿತಿಯನ್ನು 18,000 ಅಡಿಯಿಂದ 15,000 ಅಡಿಗೆ ಇಳಿಸಲು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಇದರಿಂದಾಗಿಯೇ ಟೆಂಡರ್ ಪ್ರಕ್ರಿಯೆಯಲ್ಲಿ ಆಗಸ್ಟಾವೆಸ್ಟ್ಲ್ಯಾಂಡ್ ಪಾಲ್ಗೊಳ್ಳಲು ಸಾಧ್ಯವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.