ADVERTISEMENT

ವಿಕಿಲೀಕ್ಸ್‌ನಿಂದ ವಿವಾದಾತ್ಮಕ ಮಾಹಿತಿ

ಯುದ್ಧ ವಿಮಾನ ಖರೀದಿಯಲ್ಲಿ ರಾಜೀವ್ ಗಾಂಧಿ ಮಧ್ಯಸ್ಥಿಕೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 19:59 IST
Last Updated 8 ಏಪ್ರಿಲ್ 2013, 19:59 IST
ವಿಕಿಲೀಕ್ಸ್‌ನಿಂದ ವಿವಾದಾತ್ಮಕ ಮಾಹಿತಿ
ವಿಕಿಲೀಕ್ಸ್‌ನಿಂದ ವಿವಾದಾತ್ಮಕ ಮಾಹಿತಿ   

ನವದೆಹಲಿ (ಐಎಎನ್‌ಎಸ್): ಸ್ವೀಡನ್ ಕಂಪೆನಿ ಸಾಬ್-ಸ್ಕ್ಯಾನಿಯಾ 1970ರ ಅವಧಿಯಲ್ಲಿ ಯುದ್ಧ ವಿಮಾನಗಳನ್ನು ಭಾರತಕ್ಕೆ ಮಾರಾಟ ಮಾಡಲು ನಡೆಸಿದ್ದ ಪ್ರಯತ್ನದಲ್ಲಿ  ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು `ಮುಖ್ಯ ಮಧ್ಯಸ್ಥಿಕೆದಾರ'ನಂತೆ ಕಾರ್ಯನಿರ್ವಹಿಸಿದ್ದರು ಎಂಬ ಗೋಪ್ಯ ಮಾಹಿತಿಯನ್ನು ವಿಕಿಲೀಕ್ಸ್ ಬಹಿರಂಗಗೊಳಿಸಿದೆ. ಇದು ದೇಶದ ರಾಜಕೀಯ ವಲಯದಲ್ಲಿ  ವಿವಾದದ ಹೊಸ ಅಲೆ ಎಬ್ಬಿಸಿದೆ.

ರಾಜೀವ್ ಗಾಂಧಿ ಅವರ ಮಧ್ಯಸ್ಥಿಕೆಗೆ ಸಂಬಂಧಿಸಿ ಸ್ವೀಡನ್ ರಾಯಭಾರಿಯೊಬ್ಬರು ದೆಹಲಿಯ ಅಮೆರಿಕದ ರಾಯಭಾರ ಕಚೇರಿಗೆ ಕಳುಹಿಸಿದ ತಂತಿ ಸಂದೇಶವನ್ನು ವಿಕಿಲೀಕ್ಸ್ ಸಂಗ್ರಹಿಸಿ ಈಗ ಬಹಿರಂಗಪಡಿಸಿದೆ.

ಕೆಸರೆರಚಾಟ: ವಿಕಿಲೀಕ್ಸ್ ಜೊತೆಗೆ ಸೇರಿಕೊಂಡು `ದಿ ಹಿಂದೂ' ಪತ್ರಿಕೆ ಪ್ರಕಟಿಸಿದ ಗೋಪ್ಯ ಮಾಹಿತಿಯ ವರದಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸ್ಪಷ್ಟೀಕರಣ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

`ವಿಕಿಲೀಕ್ಸ್‌ನಲ್ಲಿ ಬಹಿರಂಗಗೊಂಡ ಮಾಹಿತಿಗಳು ಗಂಭೀರ ಹಾಗೂ ಆಘಾತಕಾರಿ.  ಭಾರತದ ಇಬ್ಬರು ಮಾಜಿ ಪ್ರಧಾನಿಗಳ (ದಿ. ಇಂದಿರಾ ಮತ್ತು ರಾಜೀವ್) ಕುರಿತ ಬಹುಮುಖ್ಯ ಆರೋಪಗಳು ಬಹಿರಂಗಗೊಳ್ಳುವ ಮೂಲಕ ಕಾಂಗ್ರೆಸ್‌ನ ಪ್ರಮುಖ ಕುಟುಂಬದೊಂದಿಗೆ ಪ್ರಕರಣ ನೇರವಾಗಿ ತಳಕು ಹಾಕಿಕೊಂಡಿದೆ. ಆದ್ದರಿಂದ ಕಾಂಗ್ರೆಸ್ ಸ್ಪಷ್ಟೀಕರಣ ನೀಡಬೇಕು' ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಒತ್ತಾಯಿಸಿದರು.

ಆದರೆ, ಈ ರೀತಿ ಆರೋಪಗಳನ್ನು ಹೊರಿಸುವ ಮೂಲಕ ದೇಶದ ರಾಜಕೀಯ ವ್ಯವಸ್ಥೆಯನ್ನು ಎಲ್ಲಿಗೆ ಒಯ್ಯಲಾಗುತ್ತಿದೆ ಎಂಬುದರತ್ತ ಬಿಜೆಪಿ ಚಿಂತನೆ ನಡೆಸುವುದು ಅತ್ಯಗತ್ಯವಾಗಿದೆ ಎಂದು ಕಾಂಗ್ರೆಸ್ ಖಾರವಾಗಿ ಪ್ರತ್ಯುತ್ತರ ನೀಡಿದೆ.

`ತಂತಿ ಸಂದೇಶದಲ್ಲಿ ಸತ್ಯ ಅಡಗಿದೆ ಎಂದು ನಂಬುವುದಾದರೆ ಸಮಾಜವಾದಿ ಹಿನ್ನೆಲೆಯ ಜಾರ್ಜ್ ಫರ್ನಾಂಡಿಸ್ ಅವರು ಅಮೆರಿಕದ ಬೇಹುಗಾರಿಕೆ ದಳದಿಂದ (ಸಿಐಎ) ಲಂಚ ಪಡೆಯಲು ಸಮ್ಮತಿಸಿದ್ದರು ಎಂಬ ಮಾಹಿತಿಯೂ ಸತ್ಯ ಎನ್ನುವುದನ್ನು ಒಪ್ಪಬೇಕಾಗುತ್ತದೆ. 125 ವರ್ಷಗಳ ಇತಿಹಾಸವನ್ನು ಹೊಂದಿರುವ ಕಾಂಗ್ರೆಸ್, ತತ್ವ ಸಿದ್ಧಾಂತಗಳಿಗೆ ಬದ್ಧವಾಗಿದೆ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

`ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಬ್ರಿಟಿಷರ ವಿರುದ್ಧ ಪೂರ್ವಗ್ರಹ ಪೀಡಿತರಾಗ್ದ್ದಿದರು. ಅದಕ್ಕಾಗಿಯೇ ಅಲ್ಲಿಂದ ಜಾಗ್ವಾರ್ ವಿಮಾನಗಳನ್ನು ಖರೀದಿಸಬಾರದು ಎಂದು ವೈಯಕ್ತಿಕ ನಿರ್ಧಾರ ತೆಗೆದುಕೊಂಡಿದ್ದರು. ಹಾಗಾಗಿ ಫ್ರಾನ್ಸ್‌ನ ಮಿರಾಜ್ ಮತ್ತು  ಸ್ವೀಡನ್‌ನ ವಿಗ್ಗೆನ್ ಯುದ್ಧ ವಿಮಾನಗಳಲ್ಲಿ ಒಂದನ್ನು ಅವರು ಆರಿಸಬೇಕಿತ್ತು. ಈ ಹಂತದಲ್ಲಿ ರಾಜೀವ್ ಮಧ್ಯಸ್ಥಿಕೆ ನಡೆಸಿದ್ದರು.

ಫ್ರಾನ್ಸ್‌ನ ಡಸ್ಸೌಲ್ಟ್ ಕಂಪೆನಿಯ  ಮಿರಾಜ್ ಯುದ್ಧ ವಿಮಾನ ಖರೀದಿಗೆ ವಾಯುಪಡೆ ಆಗಿನ ಮುಖ್ಯಸ್ಥ ಒ.ಪಿ. ಮೆಹ್ರಾ ಅವರ ಅಳಿಯ ಮಧ್ಯಸ್ಥಿಕೆದಾರರಾಗಿದ್ದರು' ಎಂಬ ಸಂಗತಿ ವಿಕಿಲೀಕ್ಸ್‌ನ ಮಾಹಿತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.