ನವದೆಹಲಿ (ಪಿಟಿಐ): ಸೇನಾಪಡೆಗೆ ಕಳಪೆ ಗುಣಮಟ್ಟದ ವಾಹನ ಪೂರೈಸುವ ಕರಾರಿಗೆ ಒಪ್ಪಿಗೆ ನೀಡುವಂತೆ ನಿವೃತ್ತ ಅಧಿಕಾರಿಯೊಬ್ಬರು ತಮಗೆ ಲಂಚದ ಆಮಿಷ ಒಡ್ಡಿದ್ದರು ಎಂದು ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ನೀಡಿದ ದೂರಿನನ್ವಯ ಸಿಬಿಐ ಬುಧವಾರ ಪ್ರಾಥಮಿಕ ತನಿಖೆಗೆ ಚಾಲನೆ ನೀಡಿದೆ.
ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸುವ ಮುನ್ನ ಪ್ರಾಥಮಿಕ ತನಿಖೆ ನಡೆಸಲಾಗುತ್ತದೆ. ಆದರೆ, ಈ ಹಂತದಲ್ಲಿ ತನಿಖಾ ಸಂಸ್ಥೆಗೆ ಯಾರನ್ನಾದರೂ ಪ್ರಶ್ನಿಸುವ, ಶೋಧ ನಡೆಸುವ ಅಥವಾ ಬಂಧಿಸುವ ಅಧಿಕಾರ ಇರುವುದಿಲ್ಲ.
ಮೇಲ್ನೋಟಕ್ಕೆ ಆರೋಪ ಸಾಬೀತುಪಡಿಸುವಂತಹ ಸಾಕ್ಷ್ಯಗಳು ಕಂಡುಬಂದಲ್ಲಿ ಆನಂತರ ಈ ಪ್ರಾಥಮಿಕ ತನಿಖೆಯನ್ನು `ಎಫ್‌ಐಆರ್~ ಆಗಿ ಬದಲಿಸಲಾಗುವುದು.
ಸೇನೆಗೆ ವಾಹನ, ಸಲಕರಣೆ ಪೂರೈಸುವ ದಲ್ಲಾಳಿಯೊಬ್ಬರು ತಮಗೆ 14 ಕೋಟಿ ರೂಪಾಯಿ ಲಂಚದ ಆಮಿಷ ಒಡ್ಡಿದ್ದರು ಎಂದು ಸೇನಾ ಮುಖ್ಯಸ್ಥರು ರಕ್ಷಣಾ ಸಚಿವ ಎ.ಕೆ. ಆಂಟನಿ ಅವರಿಗೆ ವರದಿ ಮಾಡಿದ್ದರು. ಆನಂತರ ರಕ್ಷಣಾ ಸಚಿವಾಲಯ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಶಿಫಾರಸು ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.