ADVERTISEMENT

ವಿ.ಕೆ. ಸಿಂಗ್ ನಡೆ: ಕುತೂಹಲ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 19:30 IST
Last Updated 10 ಫೆಬ್ರುವರಿ 2012, 19:30 IST

ನವದೆಹಲಿ: ಜನರಲ್ ವಿ.ಕೆ. ಸಿಂಗ್ ಜನ್ಮದಿನದ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸರ್ಕಾರದ ನಿಲುವನ್ನು ಎತ್ತಿಹಿಡಿದಿದ್ದರಿಂದ ಅವರು ಸೇನಾ ಮುಖ್ಯಸ್ಥರ ಹುದ್ದೆಯಲ್ಲಿ ಮುಂದುವರಿಯುವ ಬಗ್ಗೆ ಈಗ ಅನುಮಾನಗಳು ಉದ್ಭವಿಸಿವೆ.

ಸರ್ಕಾರವನ್ನೇ ಕೋರ್ಟ್‌ನಲ್ಲಿ ಪ್ರಶ್ನಿಸಿದ ಕ್ರಮದಿಂದಾಗಿ ಸಿಂಗ್ ಮತ್ತು ರಕ್ಷಣಾ ಸಚಿವರಾದ ಎ.ಕೆ. ಆಂಟನಿ ನಡುವೆ ವಿಶ್ವಾಸ ಭಂಗವಾಗಿದ್ದು ಸಿಂಗ್ ಅವರ ಮುಂದಿನ ನಡೆ ಕುರಿತು ಕುತೂಹಲ ಕಾಡುತ್ತಿದೆ.

ಕೋರ್ಟ್ ತೀರ್ಪಿನಂತೆ ಸಿಂಗ್ ತಮ್ಮ ಅವಧಿ ಮುಗಿಸಿ ಮೇ 31ರಂದು ನಿವೃತ್ತರಾಗಬಹುದು. ಇಲ್ಲವೇ ತಮ್ಮ ಘನತೆ ಉಳಿಸಿಕೊಳ್ಳಲು ಹುದ್ದೆಗೆ ರಾಜೀನಾಮೆ ನೀಡಬಹುದು. ಜನರಲ್ ಸಿಂಗ್ ಅವಧಿ ಮುಗಿಸಿ ನಿವೃತ್ತರಾದಲ್ಲಿ ಈಸ್ಟರ್ನ್ ಕಮಾಂಡ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ವಿಕ್ರಮ್ ಸಿಂಗ್ ಸೇನಾ ಮುಖ್ಯಸ್ಥರಾಗುತ್ತಾರೆ.

ಅವರು ಅವಧಿಗೆ ಮುನ್ನವೇ ರಾಜೀನಾಮೆ ಸಲ್ಲಿಸಿದಲ್ಲಿ ಮಾತ್ರ ವೆಸ್ಟರ್ನ್ ಕಮಾಂಡ್‌ನ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಎಸ್. ಆರ್. ಘೋಷ್, ಸೆಂಟ್ರಲ್ ಕಮಾಂಡ್ ಮುಖ್ಯಸ್ಥ ಎ.ಕೆ. ಸಿಂಗ್ ಹಾಗೂ ಮತ್ತೊಬ್ಬ ಹಿರಿಯ ಅಧಿಕಾರಿ ವಿ.ಕೆ. ಅಹ್ಲುವಾಲಿಯಾ ಮಧ್ಯೆ ಸೇನಾ ಮುಖ್ಯಸ್ಥರ ಹುದ್ದೆಗೆ ಪೈಪೋಟಿ ನಡೆಯಬಹುದು. ಈ ಎಲ್ಲ ಅಧಿಕಾರಿಗಳೂ ಈ ಮೂರು ತಿಂಗಳಲ್ಲಿ ನಿವೃತ್ತರಾಗಲಿದ್ದಾರೆ.

ಸರ್ಕಾರ ಮತ್ತು ಸೇನಾ ಮುಖ್ಯಸ್ಥರ ನಡುವೆ ತೆರೆಮರೆ ಮಾತುಕತೆಗಳು ನಡೆಯುತ್ತಿದ್ದು, ಮೇ 31ರವರೆಗೆ ಹುದ್ದೆಯಲ್ಲಿ ಮುಂದುವರಿಯುವಂತೆ ಸಿಂಗ್ ಮನವೊಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.