ADVERTISEMENT

ವಿಜ್ಞಾನ ಕ್ಷೇತ್ರದಲ್ಲಿ ಚೀನಾ ಮುಂದೆ ಪ್ರಧಾನಿ ಕಳವಳ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST

ಭುವನೇಶ್ವರ: ವೈಜ್ಞಾನಿಕ ರಂಗದಲ್ಲಿ ಚೀನಾದಂಥ ದೇಶಗಳು ಭಾರತವನ್ನು ಹಿಂದಿಕ್ಕಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ಮನಮೋಹನ್ ಸಿಂಗ್, `ದೇಶದ ವೈಜ್ಞಾನಿಕ ಕ್ಷೇತ್ರವನ್ನು ಬಲಪಡಿಸಲು 12ನೇ ಪಂಚವಾರ್ಷಿಕ ಯೋಜನೆಯ ಅಂತ್ಯದೊಳಗೆ ಸಂಶೋಧನೆ ಹಾಗೂ ಅಭಿವೃದ್ಧಿಗಾಗಿ ಖರ್ಚು ಮಾಡುವ ಮೊತ್ತವನ್ನು ದ್ವಿಗುಣಗೊಳಿಸಲಾಗುತ್ತದೆ~ ಎಂದು ಮಂಗಳವಾರ ಪ್ರಕಟಿಸಿದ್ದಾರೆ.

99ನೇ ಭಾರತೀಯ ವಿಜ್ಞಾನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ, `ಕಳೆದ ಕೆಲವು ದಶಕಗಳಿಗೆ ಹೋಲಿಕೆ ಮಾಡಿ ನೋಡಿದಾಗ ವೈಜ್ಞಾನಿಕ ರಂಗದಲ್ಲಿ ದೇಶದ ಸ್ಥಾನವು ಕುಸಿಯುತ್ತಾ ಬಂದಿದೆ. ಭಾರತೀಯ ವಿಜ್ಞಾನಕ್ಕೆ ಹೊಸದೊಂದು ಆಯಾಮ ಕೊಡಲು ನಾವು ಇನ್ನಷ್ಟು ಕೆಲಸ ಮಾಡಬೇಕಾದ ತುರ್ತು ಎದುರಾಗಿದೆ~ ಎಂದು ಹೇಳಿದರು.

ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯುವಕರು ಮಧ್ಯದ್ಲ್ಲಲಿ ಕೆಲಸ ಬಿಟ್ಟು ಹೋಗುತ್ತಾರೆ. ಇನ್ನು ಯುವತಿಯರಿಗೆ ಮದುವೆಯಾದ ಬಳಿಕ ಬೇರೆ ಬೇರೆ ಕಾರಣಗಳಿಂದಾಗಿ ವೃತ್ತಿಯನ್ನು ಮುಂದುವರಿಸಲಾಗದ ಅನಿವಾರ್ಯತೆ ಎದುರಾಗುತ್ತದೆ. ಹಾಗಾಗಿಯೇ ಈ ಕ್ಷೇತ್ರದಲ್ಲಿ ತೆರವಾದ ಸ್ಥಾನವನ್ನು ಭರ್ತಿ ಮಾಡುವ ಪ್ರಕ್ರಿಯೆ ದುರ್ಬಲವಾಗಿದೆ ಎಂದೂ ವ್ಯಾಖ್ಯಾನಿಸಿದರು.

ವಿಜ್ಞಾನ ಹಾಗೂ ಎಂಜಿನಿಯರಿಂಗ್ ಕ್ಷೇತ್ರ ವಿದ್ಯಾರ್ಥಿಗಳನ್ನು ಈಗಲೂ ಸೆಳೆಯುತ್ತಿದೆ ಎನ್ನುವುದರಲ್ಲಿ ಅನುಮಾನವೇನೂ ಇಲ್ಲ. ಆದರೆ ವಿಜ್ಞಾನ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯ ಇಲ್ಲ ಎನ್ನುವ ಕಾರಣಕ್ಕೆ ಅನೇಕರು ವೃತ್ತಿ ಬದಲಾಯಿಸುತ್ತಾರೆ ಎಂದು ಹೇಳಿದ ಪ್ರಧಾನಿ, ಈ ಕ್ಷೇತ್ರದಲ್ಲಿ ಅರ್ಧಕ್ಕೇ ವೃತ್ತಿ ಬಿಡುತ್ತಿರುವುದಕ್ಕೆ ಇರುವ ಕಾರಣಗಳನ್ನು ಒಂದೊಂದಾಗಿ ವಿವರಿಸಿದರು.

 ಏಪ್ರಿಲ್ 1ರಿಂದ ಅನ್ವಯವಾಗುವ ಹೊಸ ಪಂಚವಾರ್ಷಿಕ ಯೋಜನೆಯಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ವಲಯಕ್ಕೆ ಹೊಸ ಮೂಲ ಸೌಕರ್ಯವನ್ನು ಒದಗಿಸಲಾಗುತ್ತದೆ ಎಂದು ಭರವಸೆ ನೀಡಿದ ಅವರು, ಈ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸುವಂತೆ ಉದ್ಯಮಗಳಿಗೆ ಕರೆ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.