ನವದೆಹಲಿ (ಪಿಟಿಐ): ಶ್ರೀಲಂಕಾ ನೌಕಾಪಡೆ ಸಿಬ್ಬಂದಿ ಭಾರತೀಯ ಮೀನುಗಾರರ ಮೇಲೆ ಹಲ್ಲೆ ನಡೆಸಿದ ಇತ್ತೀಚಿನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ವಿವರ ಕೇಳಿ ವಿದೇಶಾಂಗ ಸಚಿವಾಲಯಕ್ಕೆ ನೋಟಿಸ್ ನೀಡಿದೆ.
ಹಲ್ಲೆ ಪ್ರಕರಣವನ್ನು ಉಲ್ಲೇಖಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಆಯೋಗಕ್ಕೆ ದೂರು ನೀಡಿ, ಮಧ್ಯೆ ಪ್ರವೇಶಿಸುವಂತೆ ಕೋರಿದ್ದರು.
ಮಾರ್ಚ್ 3ರಂದು ಪ್ರಕರಣದ ಪ್ರಥಮ ವಿಚಾರಣೆ ನಡೆದಾಗ, ಆಯೋಗವು ವಿದೇಶಾಂಗ ಕಾರ್ಯದರ್ಶಿಗೆ ಪತ್ರ ಬರೆದು ಎರಡು ವಾರಗಳ ಒಳಗೆ ವರದಿ ಸಲ್ಲಿಸಲು ತಿಳಿಸಿತ್ತು.
ತಮಿಳುನಾಡಿನ ಮೀನುಗಾರರು ಕೆಲವೊಮ್ಮೆ ಜಲಸೀಮೆಯನ್ನು ಗುರುತಿಸದೆ ಶ್ರೀಲಂಕಾ ಗಡಿಯನ್ನು ಪ್ರವೇಶಿಸುತ್ತಾರೆ. ಇಂತಹ ಸಂದರ್ಭದಲ್ಲಿ ಹಲ್ಲೆ ಅಥವಾ ಗುಂಡಿನ ದಾಳಿಗೆ ಗುರಿಯಾಗುತ್ತಾರೆ ಎಂದು ಗಡ್ಕರಿ ದೂರಿನಲ್ಲಿ ತಿಳಿಸಿದ್ದರು.
2008ರಿಂದ ಈವರೆಗೆ ತಮಿಳುನಾಡಿನ 8 ಮೀನುಗಾರರು ಶ್ರೀಲಂಕಾ ಸೈನಿಕರ ಗುಂಡೇಟಿಗೆ ಬಲಿಯಾಗಿದ್ದಾರೆ. ಈ ವರ್ಷಾರಂಭದಲ್ಲಿ ಇಬ್ಬರು ಹತ್ಯೆಗೀಡಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.