ADVERTISEMENT

ವಿದೇಶಿ ಬ್ಯಾಂಕ್ ಕಪ್ಪುಹಣಕ್ಕೂ ತೆರಿಗೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 18:30 IST
Last Updated 9 ಫೆಬ್ರುವರಿ 2011, 18:30 IST

ನವದೆಹಲಿ (ಪಿಟಿಐ): ನೇರ ತೆರಿಗೆ ನಿಯಮಾವಳಿ ಮಸೂದೆಯಡಿ ವಿದೇಶಿ ಬ್ಯಾಂಕುಗಳಲ್ಲಿ ಇರಿಸಿರುವ ಕಪ್ಪುಹಣ ಕೂಡ ತೆರಿಗೆ ವ್ಯಾಪ್ತಿಗೆ ಒಳಪಡುತ್ತದೆ ಎಂದು ಕೇಂದ್ರ ಸರ್ಕಾರ ಬುಧವಾರ ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ.

ವಿದೇಶಗಳಲ್ಲಿರುವ ಕಪ್ಪುಹಣವನ್ನು ವಾಪಸು ತರಲು ತೆಗೆದುಕೊಂಡಿರುವ ಕ್ರಮದ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದ ಸಂದರ್ಭದಲ್ಲಿ ಇದನ್ನು ತಿಳಿಸಲಾಯಿತು.

ತೆರಿಗೆ ಮಾಹಿತಿ ವಿನಿಮಯ ಒಪ್ಪಂದ (ಟಿಐಎಫ್‌ಎ) ಮಾಡಿಕೊಳ್ಳುವ ನಿಟ್ಟಿನಲ್ಲಿ 10 ರಾಷ್ಟ್ರಗಳೊಂದಿಗೆ ಈಗಾಗಲೇ ಮಾತುಕತೆ ಪ್ರಕ್ರಿಯೆ ಪೂರ್ಣಗೊಂಡಿದೆ. ಬಹಾಮಾಸ್, ಬರ್ಮುಡಾ, ಬ್ರಿಟಿಷ್ ವರ್ಜಿನ್ ಐಲ್ಯಾಂಡ್, ಬ್ರಿಟಿಷ್ ಐಲ್ಯಾಂಡ್ ಆಫ್ ಜೆರ್ಸಿ, ಮೊನಾಕೊ, ಸೇಂಟ್ ಕಿಟ್ಸ್ ಅಂಡ್ ನೆವಿಸ್, ಅರ್ಜೆಂಟಿನಾ ಮತ್ತು ಮಾರ್ಷಲ್ ಐಲ್ಯಾಂಡ್‌ಗಳು ಇದರಲ್ಲಿ ಸೇರಿವೆ. ಈ ಪೈಕಿ ಎಂಟು ಒಪ್ಪಂದಗಳಿಗೆ ಸಂಬಂಧಿಸಿ ಕೇಂದ್ರ ಸಚಿವ ಸಂಪುಟ ಈಗಾಗಲೇ ಒಪ್ಪಿಗೆ ನೀಡಿದೆ ಎಂದು ಹೇಳಲಾಯಿತು.

ADVERTISEMENT

ವಿದೇಶಗಳಲ್ಲಿರುವ ಕಪ್ಪುಹಣ ವಾಪಸು ತರಲು ಕೋರಿ ರಾಂ ಜೇಠ್ಮಲಾನಿ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಸುದರ್ಶನ ರೆಡ್ಡಿ ಮತ್ತು ಎಸ್.ಎಸ್.ನಿಜ್ಜಾರ್ ಅವರು ಹಲವು ಪ್ರಶ್ನೆಗಳನ್ನು ಎತ್ತಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರದ ಹಣಕಾಸು ಇಲಾಖೆ ಈ ಪ್ರಮಾಣಪತ್ರವನ್ನು ಕೋರ್ಟ್‌ಗೆ ಸಲ್ಲಿಸಿದೆ.
ಪ್ರಸ್ತುತ ಜಾರಿಯಲ್ಲಿರುವ ದುಪ್ಪಟ್ಟು ತೆರಿಗೆ ನಿವಾರಣಾ ಒಪ್ಪಂದಕ್ಕೆ (ಡಿಟಿಎಎ) ತಿದ್ದುಪಡಿ ತರುವ ಬಗ್ಗೆ ಸರ್ಕಾರ 65 ರಾಷ್ಟ್ರಗಳೊಂದಿಗೆ ಮಾತುಕತೆ ಪ್ರಕ್ರಿಯೆಗೆ ಚಾಲನೆ ನೀಡಿದೆ ಎಂದೂ ಇದೇ ವೇಳೆ ತಿಳಿಸಲಾಯಿತು.

ವಿದೇಶಗಳಲ್ಲಿರುವ ಕಪ್ಪುಹಣ ಪ್ರಮಾಣದ ಬಗ್ಗೆ ಯಾವುದೇ ಹೊಸ ಸಮೀಕ್ಷೆ ನಡೆಸಿಲ್ಲ. ಆದರೆ ಜಾಗತಿಕ ಹಾಗೂ ದೇಶೀಯವಾಗಿ ಇತ್ತೀಚೆಗೆ ಆಗಿರುವ ಬದಲಾವಣೆಗಳನ್ನು ಗಮನದಲ್ಲಿರಿಸಿಕೊಂಡು ಸಮಗ್ರ ಸಮೀಕ್ಷೆ ನಡೆಸುವ ಪ್ರಸ್ತಾವವನ್ನು ಹಣಕಾಸು ಇಲಾಖೆ ಹೊಂದಿದೆ ಎಂದು ಹೇಳಲಾಯಿತು.

ಗೋಪ್ಯವಾಗಿರಿಸಿದ ವಿದೇಶಿ ಬ್ಯಾಂಕ್ ಖಾತೆಗಳು ಹಾಗೂ ಅಕ್ರಮ ಅಂತರರಾಷ್ಟ್ರೀಯ ವಹಿವಾಟುಗಳಿಗೆ ನಿರ್ಬಂಧ ಹಾಕಬೇಕಾದರೆ ಕಠಿಣ ಕ್ರಮಗಳು ಅತ್ಯಗತ್ಯ ಎಂಬುದನ್ನು ಸರ್ಕಾರ ಮನಗಂಡಿದೆ. ಹೀಗಾಗಿ, ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ತ್ವರಿತವಾಗಿ ವಿಚಾರಣೆ ಪ್ರಕ್ರಿಯೆ ಆರಂಭಿಸಲು ಆದಾಯ ತೆರಿಗೆ ಇಲಾಖೆಗೆ ನೇರ ತೆರಿಗೆ ಇಲಾಖೆ ಸೂಚಿಸಿದೆ ಎಂದೂ ಇದೇ ವೇಳೆ ತಿಳಿಸಲಾಯಿತು.

ಒಮ್ಮೆ ವಿಚಾರಣೆ ಆರಂಭವಾಗಿಬಿಟ್ಟರೆ ಅಂತಹ ಪ್ರಕರಣಗಳಿಗೆ ಸಂಬಂಧಿಸಿದ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗಲಿದೆ.
ಇನ್ನಿತರ ಕಾನೂನು ಜಾರಿ ನಿರ್ದೇಶನಾಲಯಗಳೂ ಆ ಮಾಹಿತಿ ಬಳಸಿಕೊಳ್ಳಬಹುದು ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.