ADVERTISEMENT

ವಿದೇಶಿ ಹೂಡಿಕೆದಾರರು ವಿಶ್ವಾಸ ಕಳೆದುಕೊಂಡಿಲ್ಲ- ಸಿಬಲ್

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 19:30 IST
Last Updated 19 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): ವಿದೇಶಿ ಬಂಡವಾಳ ಹೂಡಿಕೆದಾರರು ದೂರಸಂಪರ್ಕ ಕ್ಷೇತ್ರದ ಕುರಿತು ವಿಶ್ವಾಸ ಕಳೆದುಕೊಂಡಿಲ್ಲ ಎಂದು ಹೇಳಿರುವ ಕೇಂದ್ರ ದೂರಸಂಪರ್ಕ ಸಚಿವ ಕಪಿಲ್ ಸಿಬಲ್, ಸುಪ್ರೀಂಕೋರ್ಟ್‌ನ ತೀರ್ಪಿನಿಂದಾಗಿ ಮತ್ತೊಮ್ಮೆ ನಡೆಯಲಿರುವ ತರಂಗಾಂತರ ಹರಾಜಿನಲ್ಲಿ ಹೂಡಿಕೆದಾರರು ಭಾಗವಹಿಸಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ವಿದೇಶಗಳ ದೂರಸಂಪರ್ಕ ಹೂಡಿಕೆದಾರರು ಭಾರತವನ್ನು ತೊರೆಯುವ ಸಾಧ್ಯತೆಯನ್ನು ಅವರು ಇದೇ ಸಂದರ್ಭದಲ್ಲಿ ತಳ್ಳಿ ಹಾಕಿದರು.

`ದೂರಸಂಪರ್ಕ ಕ್ಷೇತ್ರದಲ್ಲಿ ಬಂಡವಾಳ ಹೂಡುವ ಕುರಿತಾಗಿ ವಿದೇಶಿ ಹೂಡಿಕೆದಾರರಲ್ಲಿ ಯಾವುದೇ ಹಿಂಜರಿಕೆ ಇಲ್ಲ~ ಎಂದು ಸಿಬಲ್ ಹೇಳಿದ್ದಾರೆ.

ADVERTISEMENT

2ಜಿ ತರಂಗಾತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ 122 ಪರವಾನಗಿಗಳನ್ನು ರದ್ದು ಗೊಳಿಸಿ ಹೊರಡಿಸಿದ ತೀರ್ಪಿನಿಂದ ಬಾಧಿತವಾಗಿದ್ದ ಹೆಚ್ಚಿನ ವಿದೇಶಿ ದೂರಸಂಪರ್ಕ ಕಂಪೆನಿಗಳ ಮುಖ್ಯಸ್ಥರನ್ನು ಕಪಿಲ್ ಸಿಬಲ್ ಭೇಟಿಯಾಗಿದ್ದರು.

`ತಾವು ಇನ್ನೊಬ್ಬರ ಬಳಿಯಿದ್ದ ಕಾನೂನುಬದ್ಧ ಪರವಾನಗಿಯ ಮೂಲಕ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿದ್ದಾಗಿ ಕೆಲವು ಸಂಸ್ಥೆಗಳು ನನಗೆ ತಿಳಿಸಿವೆ. ಸುಪ್ರೀಂಕೋರ್ಟ್‌ನ ಆದೇಶದಂತೆ ಮತ್ತೊಮ್ಮೆ ತರಂಗಾಂತರ ಹರಾಜು ಪ್ರಕ್ರಿಯೆ ನಡೆಸುವ ಅಗತ್ಯವಿದೆ ಎಂದು ಅವರಿಗೆ ಮನವರಿಕೆ ಮಾಡಿದಾಗ, ನಾವು ಅದರಲ್ಲಿ ಪಾಲ್ಗೊಳ್ಳುವುದಾಗಿ ಹೇಳಿವೆ. ಖಂಡಿತವಾಗಿಯೂ ಅವುಗಳು ಹರಾಜಿನಲ್ಲಿ ಭಾಗವಹಿಸಲಿವೆ~ ಎಂದು ಸಿಬಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.