ADVERTISEMENT

ವಿದ್ಯಾರ್ಥಿ ಚುನಾವಣೆ: ಗೆಲುವು ಅಣ್ಣಾ ನಿರಶನ ಕಾರಣ- ಎಬಿವಿಪಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 19:35 IST
Last Updated 10 ಸೆಪ್ಟೆಂಬರ್ 2011, 19:35 IST

ನವದೆಹಲಿ (ಐಎಎನ್‌ಎಸ್): ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಒಕ್ಕೂಟದ (ಡಿಯುಎಸ್‌ಯು) ಪದಾಧಿಕಾರಿಗಳ ಚುನಾವಣೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮೇಲುಗೈ ಸಾಧಿಸಿದೆ. ಈ ಗೆಲುವಿಗೆ ಅಣ್ಣಾ ಹಜಾರೆ ಅವರು ನಡೆಸಿದ ನಿರಶನ ಕಾರಣ ಎಂದು ಎಬಿವಿಪಿ ಹೇಳಿದೆ.

ಆದರೆ, ಡಿಯುಎಸ್‌ಯು ಅಧ್ಯಕ್ಷ ಗಾದಿಯನ್ನು ಭಾರತೀಯ ವಿದ್ಯಾರ್ಥಿಗಳ ಒಕ್ಕೂಟ (ಎನ್‌ಎಸ್‌ಯುಐ) ತನ್ನ ಒಡಲಿಗೆ ಹಾಕಿಕೊಂಡಿದೆ. ರಾಜಧಾನಿಯ ಶೈಕ್ಷಣಿಕ ವಲಯದಲ್ಲಿ ಬಹು ಪ್ರಮುಖ ಚುನಾವಣೆಯಾದ ಡಿಯುಎಸ್‌ಯು ಉಪಾಧ್ಯಕ್ಷ ಸ್ಥಾನ ಸೇರಿದಂತೆ ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿ ಸ್ಥಾನವನ್ನು ಎಬಿವಿಪಿ ಗೆದ್ದುಕೊಂಡಿದೆ.
 
ಕರಿ ಟೋಪಿ ಬದಲು ಗಾಂಧಿ ಟೋಪಿ
(ಭೋಪಾಲ್ ವರದಿ, ಪಿಟಿಐ):  ಅಣ್ಣಾ ಹಜಾರೆ ಅವರ ನಿರಶನದ ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕರ್ತರು ಕರಿ ಟೋಪಿ ಬದಲಿಗೆ ಗಾಂಧಿ ಟೋಪಿ ಧರಿಸತೊಡಗಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

`ಬಿಳಿಯ ಬಣ್ಣದ ಗಾಂಧಿ ಟೋಪಿ ಧರಿಸುತ್ತಿರುವುದರ ಜೊತೆಗೆ ನಾಗಪುರದಲ್ಲಿರುವ ಆರ್‌ಎಸ್‌ಎಸ್ ಮುಖ್ಯ ಕಚೇರಿಯ ಕಾರ್ಯಕರ್ತರು ಕೇಸರಿ ಬಣ್ಣದ ಬಾವುಟದ ಬದಲು ರಾಷ್ಟ್ರಧ್ವಜ ಹಿಡಿಯತೊಡಗಿದ್ದಾರೆ~ ಎಂದು ಅವರು ಸುದ್ದಿಗಾರರ ಬಳಿ ಶುಕ್ರವಾರ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರು ಭ್ರಷ್ಟಾಚಾರದ ವಿರುದ್ಧ ಕೈಗೊಳ್ಳಲು ನಿರ್ಧರಿಸಿರುವ ರಥಯಾತ್ರೆ ಬಗ್ಗೆ ಪ್ರತಿಕ್ರಿಯಿಸಿದ ಸಿಂಗ್, ಅಡ್ವಾಣಿ ಅವರು ಮೊದಲು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಲಿ ಎಂದಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.