ADVERTISEMENT

ವಿದ್ಯುತ್‌ಗೇಕೆ ₹62,549 ಕೋಟಿ: ರಾಹುಲ್‌

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2017, 19:30 IST
Last Updated 1 ಡಿಸೆಂಬರ್ 2017, 19:30 IST
ರಾಹುಲ್‌ ಅವರಿಗೆ ಭಾವನಗರದ ನಾರಿ ಚೋಕ್ಡಿಯಲ್ಲಿ ಬೆಂಬಲಿಗರು ಶುಭಾಶಯ ಹೇಳಿದರು ಪಿಟಿಐ ಚಿತ್ರ
ರಾಹುಲ್‌ ಅವರಿಗೆ ಭಾವನಗರದ ನಾರಿ ಚೋಕ್ಡಿಯಲ್ಲಿ ಬೆಂಬಲಿಗರು ಶುಭಾಶಯ ಹೇಳಿದರು ಪಿಟಿಐ ಚಿತ್ರ   

ನವದೆಹಲಿ: ಗುಜರಾತ್‌ ಸರ್ಕಾರವು 2002ರಿಂದ 2016ರ ಅವಧಿಯಲ್ಲಿ ವಿದ್ಯುತ್‌ ಖರೀದಿಸುವುದಕ್ಕಾಗಿ ಖಾಸಗಿ ವಿದ್ಯುತ್‌ ಕಂಪೆನಿಗಳಿಗೆ ₹62,549 ಕೋಟಿ ಪಾವತಿಸಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಇದಕ್ಕೆ ವಿವರಣೆ ಕೊಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಹುಲ್ ಆಗ್ರಹಿಸಿದ್ದಾರೆ.

‘2002ರಿಂದ 2016ರ ನಡುವೆ ₹62,549 ಕೋಟಿಯ ವಿದ್ಯುತ್‌ ಖರೀದಿಸುವ ಮೂಲಕ ನೀವು ಖಾಸಗಿ ಕಂಪೆನಿಗಳ ಜೇಬು ತುಂಬಿಸುವ ಕೆಲಸ ಯಾಕೆ ಮಾಡಿದ್ದೀರಿ? ಸರ್ಕಾರಿ ಸ್ವಾಮ್ಯದ ವಿದ್ಯುತ್ ಕಂಪೆನಿಗಳ ಸಾಮರ್ಥ್ಯ ಶೇ 62ರಷ್ಟು ಕುಸಿದಿದೆ. ವಿದ್ಯುತ್‌ ದರ ಯೂನಿಟ್‌ಗೆ ₹3 ಇದೆ. ಆದರೆ ಖಾಸಗಿ ಕಂಪೆನಿಗಳಿಗೆ ಯೂನಿಟ್‌ಗೆ ₹24 ನೀಡಲಾಗಿದೆ’ ಎಂದು ರಾಹುಲ್‌ ಟ್ವೀಟ್‌ ಮಾಡಿದ್ದಾರೆ.

8,641 ಮೆ.ವಾ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯವನ್ನು ಸರ್ಕಾರದ ವಿದ್ಯುತ್‌ ಸ್ಥಾವರಗಳು ಹೊಂದಿವೆ. ಆದರೆ ಕಳೆದ ಮೂರು ವರ್ಷಗಳಲ್ಲಿ ಶೇ 33ರಿಂದ 38ರಷ್ಟು ವಿದ್ಯುತ್‌ ಮಾತ್ರ ಉತ್ಪಾದನೆ ಆಗುತ್ತಿದೆ ಎಂದು ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ ಆಪಾದಿಸಿದ್ದಾರೆ.

ADVERTISEMENT

‘ಅದಾನಿ, ಟಾಟಾ, ಎಸ್ಸಾರ್‌ ಮತ್ತು ಚೀನಾ ಲೈಟ್‌ ಪವರ್‌ ಎಂಬ ನಾಲ್ಕು ಖಾಸಗಿ ಕಂಪೆನಿಗಳಿಂದ ದುಬಾರಿ ದರದಲ್ಲಿ ವಿದ್ಯುತ್‌ ಖರೀದಿ ಮಾಡ
ಲಾಗಿದೆ. ಗುಜರಾತಿನ ತೆರಿಗೆದಾರರ ಹಣವನ್ನು ಪೋಲು ಮಾಡಲಾಗಿದೆ’ ಎಂದು ಸುರ್ಜೇವಾಲಾ ಆರೋಪಿಸಿದ್ದಾರೆ.

ಚುನಾವಣೆಯ ಮುಖ್ಯ ವಿಷಯ ಅಭಿವೃದ್ಧಿ ವಿಚಾರಗಳಿಂದ ಬೇರೆಡೆಗೆ ಹೋಗಬಾರದು ಎಂಬ ಕಾರಣಕ್ಕೆ ಇಂತಹ ವಿಚಾರಗಳ ಬಗ್ಗೆ ದಿನಕ್ಕೊಂದು ಪ್ರಶ್ನೆ ಕೇಳುವ ‘ಗುಜರಾತ್‌ಗೆ ಬೇಕು ಉತ್ತರದಾಯಿತ್ವ’ ಎಂಬ ಸಾಮಾಜಿಕ ಜಾಲ ತಾಣ ಅಭಿಯಾನವನ್ನು ರಾಹುಲ್‌ ಆರಂಭಿಸಿದ್ದಾರೆ. ಬುಧವಾರದಿಂದ ಪ್ರತಿ ದಿನ ಒಂದೊಂದು ಪ್ರಶ್ನೆ ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.