ADVERTISEMENT

ವಿರೋಧ ಪಕ್ಷದವರನ್ನು 'ಒಸಮಾ ಬೆಂಬಲಿಗರಿಗೆ' ಹೋಲಿಸಿದ ಕೇಂದ್ರ ಸಚಿವ

​ಪ್ರಜಾವಾಣಿ ವಾರ್ತೆ
Published 4 ಜೂನ್ 2018, 20:16 IST
Last Updated 4 ಜೂನ್ 2018, 20:16 IST

ನವದೆಹಲಿ: ‘ಒಸಮಾ ಬೆಂಬಲಿಗರು’ ಮತ್ತು ‘ನಕ್ಸಲರು’ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಮಣಿಸಲು ಒಗ್ಗೂಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಗಿರಿರಾಜ್‌ ಕಿಶೋರ್‌ ಸೋಮವಾರ ಹೇಳಿದ್ದಾರೆ.

ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ ವಿರೋಧ ಪಕ್ಷಗಳ ನೇತಾರರನ್ನು ಪಾಕಿಸ್ತಾನದ ಭಯೋತ್ಪಾದಕ ಹಫೀಜ್‌ ಸಯೀದ್‌ಗೆ ಹೋಲಿಸಿದ ಬೆನ್ನಲ್ಲೇ, ಪಕ್ಷದ ಮತ್ತೊಬ್ಬ ಹಿರಿಯ ಮುಖಂಡ ಇಂತಹ ಹೇಳಿಕೆ ನೀಡಿದ್ದಾರೆ.

‘ನಕ್ಸಲರು, ಜಾತಿವಾದಿಗಳು, ನಿರಂಕುಶವಾದಿಗಳು ಮತ್ತು ಒಸಮಾ (ಬಿನ್‌ ಲಾಡೆನ್‌) ಬೆಂಬಲಿಗರೆಲ್ಲರೂ ಈಗ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ವಿರುದ್ಧ ಸೆಟೆದು ನಿಂತಿದ್ದಾರೆ. ಆದರೆ, ನದಿಯಲ್ಲಿ ಅಭಿವೃದ್ಧಿಯ ಪ್ರವಾಹವೇ ಹರಿದಿದೆ. 2019ರಲ್ಲಿ ಎನ್‌ಡಿಎ ದೋಣಿ ವಿಜಯದತ್ತ ಸಾಗುವುದು ನಿಶ್ಚಿತ’ ಎಂದು ಸಚಿವ ಸಿಂಗ್‌ ಟ್ವೀಟ್‌ ಮಾಡಿದ್ದಾರೆ.

ADVERTISEMENT

ಸಚಿವರು ಮತ್ತು ವಕ್ತಾರರ ಇಂತಹ ಹೇಳಿಕೆಗಳಿಗೆ ವಿರೋಧ ಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕಾಂಗ್ರೆಸ್‌ ನಾಯಕಿ ಶೀಲಾ ದೀಕ್ಷಿತ್‌, ‘ರಾಜಕಾರಣದಲ್ಲಿ ಮಾತ್ರ ನಾವು ಪ್ರತಿಸ್ಪರ್ಧಿಗಳು. ನಿಜ ಜೀವನದಲ್ಲಿ ಅಲ್ಲ. ಇದನ್ನು ನೆನಪಿಟ್ಟುಕೊಳ್ಳಬೇಕು. ಯಾರೂ ಇಂತಹ ವೈಯಕ್ತಿಕ ಟೀಕೆಗಳನ್ನು ಮಾಡಬಾರದು’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಮೋದಿಯವರನ್ನು ಮಣಿಸಲು ವಿರೋಧಿ ಬಣಗಳಷ್ಟೇ ಮೈತ್ರಿ ಮಾಡಿಕೊಂಡಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ಗೆಲುವು ತಡೆಯಬೇಕೆಂದು ಹಫೀಜ್‌ ಕೂಡ ಬಯಸುತ್ತಿದ್ದಾನೆ’ ಎಂದು ಪಾತ್ರಾ ಇತ್ತೀಚೆಗೆ ಟ್ವೀಟ್‌ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.