ADVERTISEMENT

ವಿಲಾಸ್‌ರಾವ್‌ಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ನ್ಯಾಯಮೂರ್ತಿ ಕಿಡಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2011, 19:30 IST
Last Updated 6 ಫೆಬ್ರುವರಿ 2011, 19:30 IST

ನವದೆಹಲಿ (ಪಿಟಿಐ):  ಬಡ ರೈತರಿಗೆ ಸಾಲ ನೀಡಿ ಅಧಿಕ ಬಡ್ಡಿ ವಸೂಲು ಮಾಡುತ್ತಿದ್ದ ಕಾಂಗ್ರೆಸ್ ಶಾಸಕನ ವಿರುದ್ಧ ಪೊಲೀಸ್ ಮೊಕದ್ದಮೆ ದಾಖಲಾಗಲು ಅಡ್ಡಿಯಾಗಿದ್ದ ಮಹಾ ರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶಮುಖ್ ಅವರು ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿರುವುದು ಎಷ್ಟರಮಟ್ಟಿಗೆ ಸರಿ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎ.ಕೆ.ಗಂಗೂಲಿ ಪ್ರಶ್ನಿಸಿದ್ದಾರೆ.

ಮುಂಬೈನಲ್ಲಿ ಶನಿವಾರ ವಿಚಾರ ಸಂಕಿರಣವೊಂದರಲ್ಲಿ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ ಗಂಗೂಲಿ ಅವರು, ‘ಇಂಥವರಿಗೆ ಸರ್ಕಾರದ ಪ್ರತಿನಿಧಿಗಳಾಗಿ ಮುಂದುವರಿಯಲು ಅವಕಾಶ ನೀಡುವುದು ಕಳವಳಕಾರಿ ಹಾಗೂ ಆಘಾತಕಾರಿ ಸಂಗತಿಯಾಗಿದೆ. ಅದೂ ಅಲ್ಲದೆ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ. ಇದೊಂದು ಲಜ್ಜೆ ಇಲ್ಲದ ನಿರ್ಧಾರ’ ಎಂದರು.

ಇದೇ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಡಿ.14ರಂದು ದೇಶಮುಖ್ ಕಾರ್ಯವೈಖರಿಯನ್ನು ಅಸಮರ್ಥನೀಯ ಎಂದು ಹೇಳಿತ್ತು. ಅಲ್ಲದೆ, ಬಾಂಬೆ ಹೈಕೋರ್ಟ್ ಮಹಾರಾಷ್ಟ್ರ ಸರ್ಕಾರಕ್ಕೆ ವಿಧಿಸಿದ್ದ ದಂಡದ ಮೊತ್ತವನ್ನು ರೂ 25,000ದಿಂದ ರೂ 10 ಲಕ್ಷಕ್ಕೆ ಹೆಚ್ಚಿಸಿತ್ತು.

ADVERTISEMENT

ವಿದರ್ಭ ಭಾಗದ ಶಾಸಕ ದಿಲೀಪ್ ಕುಮಾರ್ ಸಾನಂದ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ರೈತರು ನೀಡಿದ್ದ ಬಡ್ಡಿ ವಸೂಲಿ ಕಿರುಕುಳದ ದೂರುಗಳನ್ನು ದಾಖಲಿಸದಂತೆ  2006ರ ಮೇ ತಿಂಗಳಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ದೇಶಮುಖ್ ಜಿಲ್ಲಾಧಿಕಾರಿ ಮತ್ತು ಪೊಲೀಸರ ಮೇಲೆ ಒತ್ತಡ ಹೇರಿದ್ದರು. ಮುಖ್ಯಮಂತ್ರಿಯವರ ಈ ಕಾರ್ಯವೈಖರಿ ಕಾನೂನುಬಾಹಿರ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿತ್ತು.

ಶಾಸಕರು ಹಾಗೂ ಅವರ ಕುಟುಂಬ ಸದಸ್ಯರು ಬಡ ರೈತರಿಗೆ ಸಾಲ ನೀಡಿ ತಿಂಗಳಿಗೆ ಶೇ 10ರಷ್ಟು ಬಡ್ಡಿ ವಸೂಲಿ ಮಾಡುತ್ತಿದ್ದರೆಂದು 34 ದೂರುಗಳು ಠಾಣೆಗೆ ಬಂದಿದ್ದವು. ಆದರೂ ಅವರ ವಿರುದ್ಧ ಯಾವುದೇ ಮೊಕದ್ದಮೆ ದಾಖಲಾಗಿರಲಿಲ್ಲ. ಕೇಂದ್ರ ಸಂಪುಟದಲ್ಲಿ ಈ ಮುಂಚೆ ಭಾರಿ ಕೈಗಾರಿಕಾ ಸಚಿವರಾಗಿದ್ದ ದೇಶಮುಖ್ ಇದೀಗ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.