ಚನ್ನೈ (ಪಿಟಿಐ): ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್ (67) ಮಂಗಳವಾರ ಮಧ್ಯಾಹ್ನ ಗ್ಲೋಬಲ್ ಆಸ್ಪತ್ರೆಯಲ್ಲಿ ನಿಧನರಾದರು. ಯಕೃತ್ತಿನ ತೀವ್ರ ತೊಂದರೆಗೆ ಒಳಗಾಗಿದ್ದ ಅವರನ್ನು ಕಳೆದೊಂದು ವಾರದಿಂದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು.
ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯೊಬ್ಬರಿಂದ ಯಕೃತ್ ಪಡೆದು ಅದನ್ನು ದೇಶ್‌ಮುಖ್‌ರಿಗೆ ಕಸಿ ಮಾಡಲು ಪ್ರಯತ್ನ ನಡೆಸಿರುವ ಸಂದರ್ಭದಲ್ಲೇ ಆ ವ್ಯಕ್ತಿ ಮೃತಪಟ್ಟ ಕಾರಣ ವೈದ್ಯರ ಈ ಪ್ರಯತ್ನ ಸಫಲವಾಗಲಿಲ್ಲ. ಮತ್ತೊಬ್ಬ ವ್ಯಕ್ತಿಯ ಯಕೃತ್‌ಗೆ ವೈದ್ಯರು ಅನ್ವೇಷಣೆ ನಡೆಸುತ್ತಿದ್ದ ಸಂದರ್ಭದಲ್ಲೇ ದೇಶ್‌ಮುಖ್ ಉಸಿರು ನಿಂತು ಹೋಯಿತು.
ಪತ್ನಿ ವೈಶಾಲಿ, ಪುತ್ರರಾದ ಬಾಲಿವುಡ್ ನಟ ರಿತೇಶ್, ಶಾಸಕ ಅಮಿತ್ ಹಾಗೂ ಧೀರಜ್ ಅವರನ್ನು ದೇಶಮುಖ ಅಗಲಿದ್ದಾರೆ. ಯಕೃತ್ ವೈಫಲ್ಯದಿಂದ ಗಂಭೀರ ಸ್ಥಿತಿಗೆ ತಲುಪಿದ್ದ ದೇಶಮುಖ್ ಅವರನ್ನು ಈ ತಿಂಗಳ 6 ರಂದು ಮುಂಬೈಯಿಂದ ಕರೆತಂದು ಇಲ್ಲಿಯ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು.
ಯಕೃತ್, ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರಿಗೆ ಕೃತಕ ಉಸಿರಾಟ ಕಲ್ಪಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೆಲ ಸಮಯ ಚಿಕಿತ್ಸೆಗೆ ಸ್ಪಂದಿಸಿದರಾದರೂ ಅವರ ಹೃದಯದ ಬಡಿತ ಮಂಗಳವಾರ ಮಧ್ಯಾಹ್ನ 1.40ಕ್ಕೆ ನಿಂತುಹೋಯಿತು ಎಂದು ಆಸ್ಪತ್ರೆ ಅಧ್ಯಕ್ಷ ಕೆ. ರವೀಂದ್ರನಾಥ ಸುದ್ದಿಗಾರರಿಗೆ ತಿಳಿಸಿದರು.
ದೇಶ್‌ಮುಖ್ ಮೃತರಾದ ಸುದ್ದಿಯನ್ನು ಗೃಹ ಸಚಿವ ಸುಶೀಲ್‌ಕುಮಾರ್ ಶಿಂಧೆ ಲೋಕಸಭೆಯಲ್ಲಿ ಪ್ರಕಟಿಸುತ್ತಿದ್ದಂತೆಯೇ ಮೃತರ ಗೌರವಾರ್ಥ ಉಭಯ ಸದನಗಳ ಕಲಾಪವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.