ADVERTISEMENT

ವಿವಾದ ಶಮನಕ್ಕೆ ಯತ್ನ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 19:30 IST
Last Updated 19 ಡಿಸೆಂಬರ್ 2013, 19:30 IST

ನವದೆಹಲಿ (ಪಿಟಿಐ): ದೇವಯಾನಿ ಪ್ರಕರಣ ಕುರಿತಂತೆ ಅಮೆರಿಕದ ವಿದೇಶಾಂಗ ಇಲಾಖೆಯ ರಾಜಕೀಯ ವ್ಯವಹಾರಗಳ ಅಧೀನ ಕಾರ್ಯದರ್ಶಿ  ವೆಂಡಿ ಶೆರ್ಮನ್‌ ಅವರು ಭಾರತದ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್‌ ಅವರೊಂದಿಗೆ ಗುರುವಾರ 40 ನಿಮಿಷ ದೂರವಾಣಿಯಲ್ಲಿ ಚರ್ಚಿಸಿ ವಿವಾದ ತಿಳಿಗೊಳಿಸುವ ಯತ್ನ ನಡೆಸಿದರು.

ಆದರೆ, ಈ ಪ್ರಕರಣ ಈಗಾಗಲೇ ಅಮೆರಿಕದ ನ್ಯಾಯಾಲಯದ ಎದುರಿ­ರುವ ಕಾರಣ  ಪ್ರಕರಣವನ್ನು ಕೈಬಿಡುವ ಭಾರತದ ಬೇಡಿಕೆ ಈಡೇರು­ವುದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನ್ಯೂಯಾರ್ಕ್ ಫೆಡರಲ್‌ ನ್ಯಾಯಾಲಯದ ಅಟಾರ್ನಿ ಆಗಿರುವ  ಭಾರತ ಮೂಲದ ಪ್ರೀತ್ ಬರಾರ ಈ ಪ್ರಕರಣದ ಕುರಿತು ಕಠಿಣ ನಿಲುವು ತಳೆದಿರುವುದೂ ಕಗ್ಗಂಟಾಗಲಿದೆ.  

‘ಭಾರತದ ನ್ಯಾಯಾಂಗ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ  ಪ್ರೀತ್ ತಮ್ಮ ವ್ಯಾಪ್ತಿಯನ್ನು ಮೀರಿ ವರ್ತಿಸುತ್ತಿದ್ದಾರೆ. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅವರು ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿರುಗೇಟು ನೀಡಿದೆ.

ಒಪ್ಪಂದದ ಉಲ್ಲಂಘನೆ: ಆರೋಪಿ ಸಂಗೀತಾ ರಿಚರ್ಡ್ಸ್‌ ಪತಿ ಮತ್ತು ಮಕ್ಕಳನ್ನು ತರಾತುರಿಯಲ್ಲಿ ಭಾರತ­ದಿಂದ ತಮ್ಮ ದೇಶಕ್ಕೆ ಕರೆಸಿಕೊಳ್ಳುವ ಮೂಲಕ ಅಮೆರಿಕದ ಅಧಿಕಾರಿಗಳು ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಆರೋಪಿಸಿದ್ದಾರೆ. ಅಮೆರಿಕ, ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.