ADVERTISEMENT

ವಿಶೇಷ ಅಧಿವೇಶನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2012, 19:59 IST
Last Updated 24 ಡಿಸೆಂಬರ್ 2012, 19:59 IST

ನವದೆಹಲಿ (ಪಿಟಿಐ/ಐಎಎನ್‌ಎಸ್): `ಮಹಿಳೆಯರ ಮೇಲಿನ ಅತ್ಯಾಚಾರದಂತಹ ಹೀನ ಕೃತ್ಯಗಳನ್ನು ತಡೆಗಟ್ಟಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರಧಾನಿ ಮನಮೋಹನ್ ಸಿಂಗ್ ನೀಡಿರುವ ಹೇಳಿಕೆ ಭರವಸೆ ಮೂಡಿಸುವುದಿಲ್ಲ' ಎಂದು ಬಿಜೆಪಿ ಹೇಳಿದೆ. ಸರ್ಕಾರ ಕೂಡಲೇ ಸಂಸತ್ತಿನ ವಿಶೇಷ ಅಧಿವೇಶನ ಮತ್ತು ಸರ್ವಪಕ್ಷಗಳ ಸಭೆ ಕರೆಯುವಂತೆ ಸೋಮವಾರ ಒತ್ತಾಯಿಸಿದೆ.

`ಪ್ರಧಾನಿ ತುಂಬ ತಡವಾಗಿ ಹೇಳಿಕೆ ನೀಡಿದ್ದಾರೆ. ಇದು ಜನರಲ್ಲಿ ಯಾವ ಭರವಸೆಯನ್ನೂ ಮೂಡಿಸಿಲ್ಲ. ನಿರ್ದಿಷ್ಟ ಅವಧಿಯಲ್ಲಿ ಕ್ರಮ ಕೈಗೊಳ್ಳುವಂತಹ ಕಠಿಣ ಕಾನೂನು ಬೇಕಾಗಿದೆ' ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

`ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಕೂಡ ಈ ಕುರಿತು ಪ್ರಧಾನಿ ಅವರೊಂದಿಗೆ ಮಾತನಾಡಿದ್ದಾರೆ.

ರಾಷ್ಟ್ರಪತಿ ಭೇಟಿ: ವಿಶೇಷ ಅಧಿವೇಶನ ಕರೆಯುವಂತೆ ಒತ್ತಡ ಹೇರಲು ಬಿಜೆಪಿ ಮಂಗಳವಾರ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಭೇಟಿಯಾಗಲಿದೆ.

`ಅತ್ಯಾಚಾರ ತಡೆ ಕಾನೂನು ಬಲಪಡಿಸಲು ವಿಶೇಷ ಅಧಿವೇಶನ ಕರೆಯುವಂತೆ ಮುಖರ್ಜಿ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇವೆ' ಎಂದು ಸುಷ್ಮಾ ತಿಳಿಸಿದರು.

ಸಾರ್ವಜನಿಕರ ಅಭಿಪ್ರಾಯ ಕೇಳಿದ ವರ್ಮಾ ಸಮಿತಿ: ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ತ್ವರಿತ ನ್ಯಾಯದಾನಕ್ಕಾಗಿ ಕಾನೂನು ತಿದ್ದುಪಡಿಗೆ ಶಿಫಾರಸು ಮಾಡಲು ರಚಿಸಲಾಗಿರುವ ಮೂವರು ನ್ಯಾಯಮೂರ್ತಿಗಳ ಸಮಿತಿ ಸೋಮವಾರ ತನ್ನ ಕಾರ್ಯ ಆರಂಭಿಸಿದೆ. ಈ ವಿಷಯದ ಕುರಿತಾಗಿ ಜ.5ರಂದು ಸಾರ್ವಜನಿಕರು ಅಭಿಪ್ರಾಯ ನೀಡುವಂತೆ ತಿಳಿಸಲಾಗಿದೆ.

ಕಾನೂನು ತಜ್ಞರು, ವಕೀಲರು, ಸ್ವಯಂ ಸೇವಾ ಸಂಸ್ಥೆಗಳು, ಮಹಿಳಾ ಸಂಘಟನೆಗಳು ಮತ್ತು ಸಾರ್ವಜನಿಕರು ತಮ್ಮ ಅಭಿಪ್ರಾಯ ತಿಳಿಸಲು ಸಮಿತಿ ಮುಖ್ಯಸ್ಥರಾದಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ವರ್ಮಾ ತಿಳಿಸಿದ್ದಾರೆ.

ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಇಮೇಲ್ ವಿಳಾಸ: justice.verma@nic.in ಅಥವಾ 011-23092675ಗೆ ಫ್ಯಾಕ್ಸ್ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.