ADVERTISEMENT

ವೆಂಟಿಲೇಟರ್‌ನಲ್ಲಿ ಜೀವಂತ ಜಿರಳೆ: ಉಸಿರುಗಟ್ಟಿ ಮಹಿಳೆ ಸಾವು?

ಪಿಟಿಐ
Published 24 ಏಪ್ರಿಲ್ 2018, 17:39 IST
Last Updated 24 ಏಪ್ರಿಲ್ 2018, 17:39 IST

ನಾಸಿಕ್‌ : ಖಾಸಗಿ ಆಸ್ಪತ್ರೆಯಲ್ಲಿ ಕೃತಕ ಉಸಿರಾಟ ವ್ಯವಸ್ಥೆಗೆ ಒಳಪಟ್ಟಿದ್ದ (ವೆಂಟಿಲೇಟರ್‌ನಲ್ಲಿದ್ದ) 43 ವರ್ಷದ ಮಹಿಳೆಯು ಚಿಕಿತ್ಸೆ ಪಡೆಯುತ್ತಿದ್ದಾಗ ಜೀವಂತ ಜಿರಳೆಯೊಂದು ಯಂತ್ರದಲ್ಲಿದ್ದ ಕಾರಣ, ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಆರೋಪವನ್ನು ಆಸ್ಪತ್ರೆಯ ಆಡಳಿತ ಮಂಡಳಿ ನಿರಾಕರಿಸಿದೆ.

ಈ ತಿಂಗಳ 17ರಂದು ವಿಷಸೇವಿಸಿದ್ದ ನಗರದ ಪಂಚವಟಿ ಪ್ರದೇಶದ ನಿವಾಸಿ ಅಂಜಲಿ ಬೈರಾಗಿ ಅವರನ್ನು ಇಲ್ಲಿನ ಡಾ.ವಸಂತರಾವ್‌ ಪವಾರ್‌ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಅವರು ಈ ತಿಂಗಳ 22ರಂದು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯವರು ತಿಳಿಸಿದ್ದಾರೆ.

‘ಭಾನುವಾರ ರಾತ್ರಿ ತಾಯಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಲಾಯಿತು. ಈ ವೇಳೆ ವೆಂಟಿಲೇಟರ್‌ನ ಟ್ಯೂಬ್‌ನಲ್ಲಿ ಜಿರಳೆ ಸಿಕ್ಕಿದೆ. ಇದು ನಿರ್ಲಕ್ಷ್ಯದ ಪರಮಾವಧಿ, ಮರಣೋತ್ತರ ಪರೀಕ್ಷೆಯ ವರದಿಗಾಗಿ ಎದುರುನೋಡುತ್ತಿದ್ದು, ಸಾವಿನ ನೈಜ ಕಾರಣ ತಿಳಿದುಬರಲಿದೆ’ ಎಂದು ಅವರ ಮಗ ಧೀರಜ್‌ ಬೈರಾಗಿ ತಿಳಿಸಿದರು.

ADVERTISEMENT

ಆರೋಪ ನಿರಾಕರಣೆ: ‘ಭಾನುವಾರ ರಾತ್ರಿ 9.30ರ ವೇಳೆಗೆ ಮಹಿಳೆ ಸಾವನ್ನಪ್ಪಿದ್ದಾರೆ. ಇದಾದ ಬಳಿಕ ವೆಂಟಿಲೇಟರ್‌ನ್ನು ಸ್ಥಗಿತಗೊಳಿಸುವ ಪದ್ಧತಿಯಿದೆ. ಮಹಿಳೆ ಸಾವನ್ನಪ್ಪಿದ ಅರ್ಧಗಂಟೆ ಬಳಿಕ ಜಿರಳೆ ಇರುವುದನ್ನು ಕುಟುಂಬಸ್ಥರು ಗಮನಿಸಿದ್ದಾರೆ’ ಎಂದು ಆಸ್ಪತ್ರೆಯ ಅಧೀಕ್ಷಕ ಡಾ.ಅಜಿತ್‌ ಪಾಟೀಲ್‌ ತಿಳಿಸಿದ್ದಾರೆ.

‘ವೆಂಟಿಲೇಟರ್‌ ಚಾಲನೆಯಿದ್ದ ವೇಳೆ ಜಿರಳೆ ಜೀವಂತ ಇರಲು ಸಾಧ್ಯವಿಲ್ಲ. ಅವರಿಗೆ ವೆಂಟಿಲೇಟರ್‌ ಸಂಪರ್ಕ ಕಲ್ಪಿಸಿದ ಬಳಿಕ ಹೊಸ ಟ್ಯೂಬ್‌ ಜೋಡಣೆ ಮಾಡಲಾಗಿತ್ತು’ ಎಂದು ಅವರು ತಿಳಿಸಿದರು.

ನಾಸಿಕ್‌ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.