ನಗರ (ಪಿಟಿಐ): ಶಿವ ದೇವಾಲಯವಿರುವ ಶಂಕರಾಚಾರ್ಯ ಬೆಟ್ಟದ ಹೆಸರು ಬದಲಿಸುವ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಭಾನುವಾರ ಸ್ಪಷ್ಟಪಡಿಸಿದ್ದು ಈ ಕುರಿತು ಎದ್ದಿರುವ ವಿವಾದಕ್ಕೆ ಕೊನೆ ಹಾಡಿದ್ದಾರೆ.
‘ಶ್ರೀನಗರದಲ್ಲಿರುವ ಶಂಕರಾಚಾರ್ಯ ಬೆಟ್ಟದ ಹೆಸರು ಬದಲಿಸುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎನ್ನುವುದನ್ನು ನಾನು ಮತ್ತೆ ಮತ್ತೆ ಸ್ಪಷ್ಟಪಡಿಸುತ್ತೇನೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ. ‘ಯಾವುದೋ ಒಂದು ಗ್ರಹಿಕೆಯ ಮೇಲೆ ನಡೆಯುತ್ತಿರುವ ಈ ವಿವಾದದ ಕುರಿತ ಚರ್ಚೆಯಿಂದ ದೂರವಿರಲು ನಾನು ಬಯಸುತ್ತೇನೆ’ ಎಂದು ಅವರು ತಿಳಿಸಿದ್ದಾರೆ.
‘ಹೆಸರು ಬದಲಾವಣೆ ಮಾಡುವ ಬಗ್ಗೆ ಪ್ರಾಚ್ಯವಸ್ತು ಸರ್ವೇಕ್ಷಣಾಲಯದಿಂದ ಯಾವುದೇ ಪ್ರಸ್ತಾವ ಇಲ್ಲ ಎನ್ನುವುದನ್ನೂ ನಾನು ಖಚಿತಪಡಿಸಿಕೊಂಡಿದ್ದೇನೆ. ಆದರೂ ಈ ಕುರಿತು ಗಾಳಿ ಸುದ್ದಿ ಹರಡಿರುವುದರ ಬಗ್ಗೆ ನನಗೇನು ತಿಳಿಯದು’ ಎಂದೂ ಅವರು ಹೇಳಿದ್ದಾರೆ.
‘ವಾಜಪೇಯಿ ಯುಗಾಂತ್ಯ’
ಭೋಪಾಲ್ (ಪಿಟಿಐ): ಬಿಜೆಪಿಯಲ್ಲಿ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ.ಅಡ್ವಾಣಿ ಅವರ ಯುಗ ಅಂತ್ಯಗೊಂಡಿದೆ ಎಂದು ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿರುವ ವಾಜಪೇಯಿ ಸೋದರ ಸಂಬಂಧಿ ಕರುಣಾ ಶುಕ್ಲಾ ಭಾನುವಾರ ಹೇಳಿದ್ದಾರೆ.
‘ಬಿಜೆಪಿಯಲ್ಲಿ ನನ್ನನ್ನು ಸಂಪೂರ್ಣ ಕಡೆಗಣಿಸಲಾಗಿತ್ತು’ ಎಂದು ಮಾಜಿ ಸಂಸದೆ ಶುಕ್ಲಾ ಅಸಮಾಧಾನ ಹೊರಹಾಕಿದ್ದಾರೆ. ನರೇಂದ್ರ ಮೋದಿ, ರಾಜನಾಥ್ ಸಿಂಗ್ ಸೇರಿದಂತೆ ಇತರ ವ್ಯಕ್ತಿಗಳ ಗುಂಪು ಬಿಜೆಪಿಯನ್ನು ಮುನ್ನಡೆಸುತ್ತಿದೆ ಎಂದು ಅವರು ದೂರಿದ್ದಾರೆ.
‘ಮುಖ್ಯಮಂತ್ರಿ ರಮಣ್ ಸಿಂಗ್ ನೇತೃತ್ವದ ಪಕ್ಷದ ಛತ್ತೀಸ್‌ಗಡ ಬಿಜೆಪಿ ಘಟಕದಿಂದ ನಾನು ತೀವ್ರ ನೋವು ಅನುಭವಿಸಿದ್ದೇನೆ. ಪಕ್ಷ ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿತು’ ಎಂದು ಅವರು ಆಪಾದನೆ ಮಾಡಿದ್ದಾರೆ
.
ಉಗ್ರಾಣ ಕುಸಿತ: ಇಬ್ಬರ ಸಾವು
ಮುಂಬೈ (ಐಎಎನ್‌ಎಸ್): ಭಾನುವಾರ ಬೆಳಿಗ್ಗೆ 5 ಗಂಟೆಗೆ ಎರಡು ಅಂತಸ್ತಿನ ಗೋದಾಮು ಕುಸಿದು ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮತ್ತೊಬ್ಬರು ಗಾಯಗೊಂಡಿದ್ದು ಮುಂಬೈನ ರಾಜವಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಬೈನ ಅಂಧೇರಿಯ ಸಾಕಿ ನಾಕ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಮೂವರು ಮಲಗಿರುವ ಸಂದರ್ಭದಲ್ಲಿ ಕಟ್ಟಡ ಕುಸಿದಿದ್ದು, ಮೃತರನ್ನು ಇಸ್ಮಾಯಿಲ್ ಅನ್ವರ್ (20), ಮತ್ತು ಅಮಿತ್ (25) ಎಂದು ಗುರುತಿಸಲಾಗಿದೆ.
ಶೂಟೌಟ್ ಆರೋಪಿಗಳ ಬಂಧನ
ಗುಡಗಾಂವ್ (ಐಎಎನ್‌ಎಸ್): ರೆವರಿ ಮತ್ತು ಮಹೇಂದ್ರಗಡ ನ್ಯಾಯಾಲಯದ ಆವರಣದಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಕಾಗಿದ್ದ ಪಾತಕಿ ಮತ್ತು ಆತನ ಇಬ್ಬರು ಸಹಚರರನ್ನು ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಲದೀಪ್ ಅಲಿಯಾಸ್ ಡಾಕ್ಟರ್ ಮತ್ತು ಈತನ ಸಹಚರರಾಗಿರುವ ಕಮಲ್ ಮತ್ತು ಚರಣ್ ಸಿಂಗ್ ಅವರನ್ನು ಬಂಧಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ವಿವೇಕ ಶರ್ಮಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.