ADVERTISEMENT

ಶಂಕಿತ ಉಗ್ರನ ಬಂಧನ: ಡಿವಿಎಸ್ ವಿರುದ್ಧ ನಿತೀಶ್ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 13 ಮೇ 2012, 19:30 IST
Last Updated 13 ಮೇ 2012, 19:30 IST

 ಪಟ್ನಾ (ಪಿಟಿಐ): ಸ್ಥಳೀಯ ಪೊಲೀಸರ ಗಮನಕ್ಕೆ ತರದೇ ಕರ್ನಾಟಕ ಪೊಲೀಸರು ಬಿಹಾರದಲ್ಲಿ ಶಂಕಿತ ಉಗ್ರನನ್ನು ಬಂಧಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ನಿತೀಶ್‌ಕುಮಾರ್ ಕರ್ನಾಟಕದ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ವಿರುದ್ಧ ತೀವ್ರ ಪ್ರತಿಭಟನೆ ಸೂಚಿಸಿದ್ದಾರೆ.

ಕರ್ನಾಟಕದಿಂದ ಕಾನೂನು ಉಲ್ಲಂಘನೆಯಾಗಿದೆ ಎಂದಿದ್ದಾರೆ.

ಭಯೋತ್ಪಾದನೆ ಆರೋಪದ ಮೇರೆಗೆ ಮಹಮ್ಮದ್ ಕಫೀಲ್ ಅಖ್ತರ್ ಎಂಬಾತನನ್ನು ಕರ್ನಾಟಕದ ಪೊಲೀಸರು ಬಿಹಾರದ ದರ್ಬಾಂಗ್ ಜಿಲ್ಲೆಯಲ್ಲಿ ಬಂಧಿಸಿದ್ದರು. ಆದರೆ ಜಿಲ್ಲಾಡಳಿತದ ಗಮನಕ್ಕೆ ತರದೇ ಬಂಧಿಸಿರುವುದು ಈ ವಿವಾದಕ್ಕೆ ಕಾರಣವಾಗಿದೆ.

ಈ ಕುರಿತು ಶನಿವಾರ ಸದಾನಂದಗೌಡ ಅವರಿಗೆ ಪತ್ರ ಬರೆದಿರುವ ನಿತೀಶ್‌ಕುಮಾರ್, `ಕರ್ನಾಟಕ ಪೊಲೀಸರು ಮಾಡಿರುವುದು ಕಾನೂನು ಉಲ್ಲಂಘನೆಯ ಸ್ಪಷ್ಟ ನಿದರ್ಶನ~ ಎಂದಿದ್ದು, ಬಂಧನವನ್ನು ಬಲವಾಗಿ ಖಂಡಿಸಿದ್ದಾರೆ.

`ಕರ್ನಾಟಕ ಪೊಲೀಸ್ ತಂಡ ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟಿತ ಕಾರ್ಯಾಚರಣೆ ನಡೆಸಿಲ್ಲ~ ಎಂದು ಅವರು ಅಸಮಾಧಾನ ಹೊರ ಹಾಕಿದ್ದಾರೆ.

`ಕರ್ನಾಟಕ ಪೊಲೀಸರು ನ್ಯಾಯೋಚಿತವಾಗಿ ನಡೆದುಕೊಂಡಿಲ್ಲ. ಇಲ್ಲಿಗೆ ಭೇಟಿ ನೀಡಿದ್ದ ಪೊಲೀಸ್ ಅಧಿಕಾರಿಗಳಿಗೆ ಅಪಾಯವಾಗಿದ್ದರೆ ಅದಕ್ಕೆ ಹೊಣೆ ಯಾರು. ಅವರೇ ಅಪಾಯವನ್ನು ತಂಡುಕೊಂಡಂತಾಗುತ್ತಿತ್ತು~ ಎಂದು ನಿತೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಹಾರ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರದೇ ಕಫೀಲ್‌ಗೆ ಬಂಧಿಸಿರುವ ಕ್ರಮವನ್ನು ಸಮರ್ಥಿಸಿಕೊಂಡು ಸದಾನಂದಗೌಡ ಅವರು ಕಳೆದ ಮೂರು ದಿನಗಳ ಹಿಂದೆ ನಿತೀಶ್ ಅವರಿಗೆ ಪತ್ರ ಬರೆದಿದ್ದರು.

`ಆರೋಪಿಯನ್ನು ಬಂಧಿಸಿದ 26 ಗಂಟೆಗಳ ಬಳಿಕ ರಾಂಚಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಹೀಗಾಗಿ ಬಂಧನಕ್ಕೂ ಮುನ್ನ ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಾಕಷ್ಟು ಸಮಯವಿದ್ದರೂ ಅದನ್ನು ಮಾಡಿಲ್ಲ. ಇದು ಕಾನೂನಿನ ಮೇಲಿನ ಅಗೌರವವನ್ನು ಸೂಚಿಸುತ್ತದೆ~ ಎಂದು ನಿತೀಶ್ ಕಿಡಿ ಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.