ADVERTISEMENT

ಶಬರಿಮಲೆ ಕಾಲ್ತುಳಿತ ದುರಂತ: ಹೈಕೋರ್ಟ್‌ಗೆ ಕೇರಳ ಸರ್ಕಾರದ ಪ್ರಮಾಣಪತ್ರ

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 19:30 IST
Last Updated 21 ಜನವರಿ 2011, 19:30 IST

ಕೊಚ್ಚಿ (ಪಿಟಿಐ): ಶಬರಿಮಲೆ ಕಾಲ್ತುಳಿತ ದುರಂತಗಳು ಭವಿಷ್ಯದಲ್ಲಿ ಮರುಕಳಿಸದಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಕೇರಳ ಸರ್ಕಾರ ಶುಕ್ರವಾರ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ.

 ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದೇ ದುರಂತಕ್ಕೆ ಕಾರಣ ಎಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ನಂತರ ಎಚ್ಚೆತ್ತುಕೊಂಡ ಸರ್ಕಾರ ಶಬರಿಮಲೆಗೆ ಭಕ್ತರು ಪ್ರವೇಶಿಸಲು ಅನುಕೂಲವಾಗುವಂತೆ ನಿಲಕ್ಕಲ್ ಪ್ರದೇಶವನ್ನು ಅಭಿವೃದ್ಧಿಗೊಳಿಸುವುದಾಗಿ ಪ್ರಮಾಣಪತ್ರದಲ್ಲಿ ಹೇಳಿದೆ.

‘ಶಬರಿಮಲೆ ಸಮಗ್ರ ಅಭಿವೃದ್ಧಿಗೆ ತಯಾರಿಸಲಾಗಿರುವ ಕ್ರಿಯಾ ಯೋಜನೆ ಅನುಷ್ಠಾನ ಸಮಿತಿ ಜನಜಂಗುಳಿ ನಿಯಂತ್ರಣಕ್ಕೆ ಕೆಲವು ಯೋಜನೆಗಳನ್ನು ರೂಪಿಸಿದ್ದು ಮುಂದಿನ ವರ್ಷ ಈ ವೇಳೆಗೆ ಅವು ಕಾರ್ಯಗತಗೊಳ್ಳಲಿವೆ’ ಎಂದು ದೇವಸ್ಥಾನದ ಕಾರ್ಯದರ್ಶಿಯೂ ಆಗಿರುವ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ಜಯಕುಮಾರ್ ಅವರು ಪ್ರಮಾಣಪತ್ರ ಸಲ್ಲಿಸಿದರು.

ADVERTISEMENT

ಶಬರಿಮಲೆ ಬೆಟ್ಟದ ಕೆಳಗಿರುವ ನಿಲಕ್ಕಲ್ ಪ್ರದೇಶವನ್ನು ಅಭಿವೃದ್ಧಿಗೊಳಿಸಿ ಭಕ್ತರಿಗೆ ಉತ್ತಮ ಅನುಕೂಲತೆಗಳನ್ನು ಹೆಚ್ಚಿಸಲಾಗುವುದು. ದೇವಸ್ಥಾನಕ್ಕೆ ತೆರಳುವ ಭಕ್ತರನ್ನು ಇಲ್ಲಿಯೇ ನಿಯಂತ್ರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಎರಡು ಅಂತಸ್ತಿನ ಕಟ್ಟಡ ನಿರ್ಮಿಸುವ ಮೂಲಕ ಅಯ್ಯಪ್ಪ ಸನ್ನಿಧಿಯಲ್ಲಿ ಹೆಚ್ಚುವರಿ ಸ್ಥಳಾವಕಾಶ ಕಲ್ಪಿಸುವುದು. ಪ್ರತ್ಯೇಕ ಪ್ರವೇಶ ದ್ವಾರ ಮತ್ತು ದೇವಸ್ಥಾನದ ಹಿಂದೆ ನಿರ್ಗಮನ ಸೇತುವೆ ನಿರ್ಮಾಣ, ಪ್ರಸಾದ ನಿಲಯ ಕಟ್ಟಡ ಸ್ಥಳಾಂತರ, ಮಕರ ಜ್ಯೋತಿ ವೀಕ್ಷಣೆ ಸ್ಥಳದಲ್ಲಿ ಮುಂಜಾಗ್ರತಾ ಕ್ರಮಗಳ ಅಭಿವೃದ್ಧಿ ಮುಂತಾದವು ಕ್ರಿಯಾ ಯೋಜನೆಯಲ್ಲಿವೆ.

ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮುಂಚೆ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆ ಮತ್ತು ತಜ್ಞರನ್ನು ಸಂಪರ್ಕಿಸಿ ಸಲಹೆ, ಸೂಚನೆ ಪಡೆಯಲಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

2007ರಲ್ಲಿ ನಿವೃತ್ತ ನ್ಯಾಯಮೂರ್ತಿ ಕೆ.ಎಸ್. ಪರಿಪೂರರ್ಣನ್ ನೀಡಿದ ವರದಿಯ ಎಲ್ಲ 70 ಶಿಫಾರಸುಗಳನ್ನು ಯಥಾವತ್ತಾಗಿ ಜಾರಿಗೊಳಿಸುವುದಾಗಿ ಸರ್ಕಾರ ಈ ಸಂದರ್ಭದಲ್ಲಿ ಕೋರ್ಟ್‌ಗೆ ತಿಳಿಸಿದೆ.

ವರದಿ ನಂತರ ಸತ್ಯ ಬಹಿರಂಗ: ಪುಲ್‌ಮೇಡುವಿನಲ್ಲಿ 102 ಭಕ್ತರನ್ನು ಬಲಿ ತೆಗೆದುಕೊಂಡ ಕಾಲ್ತುಳಿತ ದುರಂತಕ್ಕೆ ಕಾರಣವಾದ ಸಂದರ್ಭ ಮತ್ತು ನಿಖರವಾದ ವಾಸ್ತವಾಂಶಗಳು ಅಪರಾಧ ವಿಭಾಗದ ತನಿಖೆ ಮುಗಿದ ನಂತರವಷ್ಟೇ ಹೊರಬರಲಿವೆ. 

 ಸ್ವಯಂ ಪ್ರೇರಿತ ವಿಚಾರಣೆ ಕೈಗೊಂಡಿರುವ ಹೈಕೋರ್ಟ್‌ಗೆ ಸರ್ಕಾರ ಎಲ್ಲ ವಿಧವಾದ ಮತ್ತು ಸಂಪೂರ್ಣ ಸಹಕಾರ ನೀಡಲಿದೆ ಎಂದು ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಅವರು ಹೇಳಿದ್ದಾರೆ. ಪುಲ್‌ಮೇಡು ಪ್ರದೇಶವನ್ನು ಪ್ರವೇಶಿಸುವ ವಾಹನಗಳಿಂದ ಪೊಲೀಸ್ ಮತ್ತು ಅರಣ್ಯ ಸಿಬ್ಬಂದಿ ಹಣ ವಸೂಲಿ ಮಾಡಿದ್ದರು ಎಂಬ ಆರೋಪಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅರಣ್ಯ ಖಾತೆ ಸಚಿವ  ಬಿನೋಯ್ ವಿಶ್ವನ್ ಅವರು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.