ADVERTISEMENT

ಶಬರಿಮಲೆ: ದುರಂತ ತಡೆಯಲು ಯೋಜನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 19:30 IST
Last Updated 10 ಫೆಬ್ರುವರಿ 2011, 19:30 IST

ತಿರುವನಂತಪುರ (ಪಿಟಿಐ): ಶಬರಿಮಲೆಯಲ್ಲಿ ಸಂಭವಿಸಿದ ನೂಕುನುಗ್ಗಲಿನಂತಹ ಘಟನೆ ತಡೆಗಟ್ಟಲು ಕೇರಳ ಸರ್ಕಾರ ಮೊದಲ ಹಂತದ ಶಬರಿಮಲೆ ಮಾಸ್ಟರ್ ಯೋಜನೆ ಪ್ರಕಟಿಸಿದ್ದು ಒಂದು ವರ್ಷದೊಳಗೆ ಇದನ್ನು ಜಾರಿಗೆ ತರಲಾಗುವುದು ಎಂದು ಗುರುವಾರ ತಿಳಿಸಿದೆ. ಈ ಕಾಮಗಾರಿಯನ್ನು ರೂ. 50 ಕೋಟಿ ಸಾಲ ಪಡೆದು ಮತ್ತು ರೂ. 25 ಕೋಟಿಯನ್ನು  ಪ್ರಾಯೋಜಕತ್ವದ ಮೂಲಕ ಪಡೆದು ಆರಂಭಿಸಲಾಗುವುದು ಎಂದು ವಿಧಾನಸಭೆಯಲ್ಲಿ 2011-12ನೇ ಬಜೆಟ್ ಮಂಡಿಸಲಿರುವ ಹಣಕಾಸು ಸಚಿವ ಟಿ.ಎಂ.  ಥಾಮಸ್ ತಿಳಿಸಿದ್ದಾರೆ.

ಬಜೆಟ್‌ನಲ್ಲಿ ಈ ಯೋಜನೆಗೆ ರೂ. 25 ಕೋಟಿ ಒದಗಿಸಲು ಯೋಜಿಸಲಾಗಿದೆ. ಈ ಕಾಮಗಾರಿಯಡಿಯಲ್ಲಿ ಬೆಟ್ಟದ ಕೆಳಗೆ ನಿಲಕ್ಕಲ್‌ನಲ್ಲಿ ಏಕಕಾಲಕ್ಕೆ 1500 ವಾಹನಗಳನ್ನು ನಿಲ್ಲಿಸಲು ಸೌಲಭ್ಯ, ಪಂಪಾದಲ್ಲಿ ತುರ್ತು ಆಂಬುಲೆನ್ಸ್ ರಸ್ತೆ ಮತ್ತು ದರ್ಶನದ ನಂತರ ಭಕ್ತಾದಿಗಳು ಕೆಳಗಿಳಿಯಲು ದೇವಸ್ಥಾನದ ಹಿಂಬದಿಯಲ್ಲಿ ಮೇಲು ಸೇತುವೆ ನಿರ್ಮಾಣ ಒಳಗೊಂಡಿದೆ.

ಜನವರಿ 14 ರಂದು ನಡೆದ ದುರಂತದಲ್ಲಿ 102 ಅಯ್ಯಪ್ಪ ಯಾತ್ರಾರ್ಥಿಗಳು ಮೃತಪಟ್ಟಿದ್ದರು. ಬುಧವಾರ ಘಟನೆಯ ಬಗ್ಗೆ ಪ್ರಸ್ತಾಪಿಸಿದ್ದ ಕಾಂಗ್ರೆಸ್ ಶಾಸಕ ಟಿ.ರಾಧಾಕೃಷ್ಣನ್, ಇಂತಹ ದುರಂತ ಸಂಭವಿಸಿದಾಗ ಪರಿಹಾರ ಘೋಷಿಸುವುದು ರೂಢಿಯಾಗಿದೆ. ಆದರೆ ಪರಿಹಾರ ಮಾತ್ರ ಬಿಡುಗಡೆಯಾಗುವುದಿಲ್ಲ ಎಂದು ಟೀಕಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.