ನವದೆಹಲಿ (ಪಿಟಿಐ): ಹಿಂಸಾಮಾರ್ಗ ತ್ಯಜಿಸುವ ಪ್ರಮುಖ ನಕ್ಸಲ್ ನಾಯಕರಿಗೆ 25 ಲಕ್ಷ ರೂಪಾಯಿವರೆಗೆ ನಗದು ಬಹುಮಾನ ನೀಡಲು ಆಂಧ್ರ ಪ್ರದೇಶ ಹಾಗೂ ಒಡಿಶಾ ಸರ್ಕಾರಗಳು ನಿರ್ಧರಿಸಿವೆ.
ನಕ್ಸಲೀಯರನ್ನು ಮುಖ್ಯವಾಹಿನಿಗೆ ಕರೆತರಲು ಗೃಹ ಸಚಿವಾಲಯ ನೀಡಿದ ಸಲಹೆ ಮೇರೆಗೆ ಅವು ಈ ತೀರ್ಮಾನಕ್ಕೆ ಬಂದಿವೆ. ಯಾವುದೇ ಶಸ್ತ್ರಾಸ್ತ್ರ ಇಲ್ಲದೆ ಶರಣಾಗುವವರಿಗೂ ನಗದು ನೀಡಲಾಗುತ್ತದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ನಕ್ಸಲ್ ಚಳವಳಿ ತೊರೆಯಬಯಸುವ ಯಾವುದೇ ಪಾಲಿಟ್‌ಬ್ಯೂರೊ ಅಥವಾ ಕೇಂದ್ರ ಸಮಿತಿ ಸದಸ್ಯರಿಗೆ ಆಂಧ್ರ ಸರ್ಕಾರವು 25 ಲಕ್ಷ ರೂಪಾಯಿ ಹಾಗೂ ಒಡಿಶಾ ಸರ್ಕಾರ 20 ಲಕ್ಷ ರೂಪಾಯಿ ಬಹುಮಾನ ಘೋಷಿಸಿವೆ.
ಲಘು ಮಶೀನ್‌ಗನ್ ತ್ಯಜಿಸುವವರಿಗೆ 5 ಲಕ್ಷ ಹಾಗೂ ಎ.ಕೆ 47 ಒಪ್ಪಿಸುವವರಿಗೆ 3 ಲಕ್ಷ ರೂಪಾಯಿ ನೀಡುವುದೂ ಸೇರಿದಂತೆ ನಕ್ಸಲೀಯರ ಶರಣಾಗತಿಗೆ ಎಲ್ಲ ರಾಜ್ಯಗಳಲ್ಲಿಯೂ ಏಕರೂಪದ ನೀತಿ ಜಾರಿಗೆ ಗೃಹ ಸಚಿವಾಲಯ ಒತ್ತಡ ಹೇರುತ್ತಿದೆ.
ಕಳೆದ ತಿಂಗಳು ಗೃಹ ಸಚಿವ ಪಿ.ಚಿದಂಬರಂ ಅವರ ಅಧ್ಯಕ್ಷತೆಯಲ್ಲಿ ನಡೆದ ನಕ್ಸಲ್ ಪೀಡಿತ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಪ್ರಧಾನ ನಿರ್ದೇಶಕರ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿತ್ತು.
`ಶರಣಾಗತಿಗೆ ಸಂಬಂಧಿಸಿದಂತೆ ಈಗಿರುವ ನೀತಿಯನ್ನು ಪರಾಮರ್ಶಿಸಬೇಕಿದೆ. ಶರಣಾಗತರಿಗೆ ನೀಡುವ ಹಣದ ಮೊತ್ತವನ್ನು ಹೆಚ್ಚಿಸಬೇಕಿದೆ. ಈ ಸಂಬಂಧ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ. ಕೇಂದ್ರವು ಇದಕ್ಕಾಗಿ ಸಹಾಯಧನ ನೀಡಲಿದೆ. ಒಟ್ಟಾರೆ ಎಲ್ಲ ರಾಜ್ಯಗಳಲ್ಲಿಯೂ ಏಕ ರೂಪದ ನೀತಿ ಜಾರಿಗೆ ಬರಬೇಕಾಗಿದೆ~ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಿಶನ್‌ಜಿ ನಿಕಟವರ್ತಿ ಸುಚಿತ್ರಾ ಶರಣಾಗತಿ ಕೋಲ್ಕತ್ತ (ಪಿಟಿಐ): ಕಳೆದ ವರ್ಷ ಜಂಟಿ ಭದ್ರತಾ ಪಡೆಗಳ ಗುಂಡೇಟಿಗೆ ಬಲಿಯಾದ ಪ್ರಮುಖ ನಕ್ಸಲ್ ನಾಯಕ ಕಿಶನ್‌ಜಿ ಮಹತೊ ಅವರ ನಿಕಟ ಸಹಚರರಾದ ಸುಚಿತ್ರಾ ಮಹತೊ ಶುಕ್ರವಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ಶರಣಾಗತರಾಗಿದ್ದಾರೆ. |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.