ADVERTISEMENT

ಶರದ್ ಯಾದವ್‌ಗೆ ಪ್ರಣವ್ ಧನ್ಯವಾದ

​ಪ್ರಜಾವಾಣಿ ವಾರ್ತೆ
Published 27 ಜೂನ್ 2012, 19:30 IST
Last Updated 27 ಜೂನ್ 2012, 19:30 IST

ನವದೆಹಲಿ /ಭುವನೇಶ್ವರ (ಪಿಟಿಐ): ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಯುಪಿಎ ಬೆಂಬಲಿತ ಅಭ್ಯರ್ಥಿ ಪ್ರಣವ್ ಮುಖರ್ಜಿ ಅವರು ಬುಧವಾರ ಜೆಡಿಯು ಮುಖ್ಯಸ್ಥ ಶರದ್ ಯಾದವ್ ಅವರನ್ನು ಭೇಟಿ ಮಾಡಿ ಚುನಾವಣೆಯಲ್ಲಿ ತಮಗೆ ಬೆಂಬಲ ಸೂಚಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.

   ಸಾಂಪ್ರದಾಯಿಕ ಬಂಗಾಳಿ ಉಡುಗೆ ಧರಿಸಿದ್ದ (ಧೋತಿ-ಕುರ್ತಾ) ಮಾಜಿ ಹಣಕಾಸು ಸಚಿವರು, ಸಂಸದೀಯ ವ್ಯವಹಾರಗಳ ಸಚಿವ ಪವನ್ ಕುಮಾರ್ ಬಾದಲ್ ಮತ್ತು ಪ್ರಧಾನಿ ಕಚೇರಿ ರಾಜ್ಯ ಖಾತೆ ಸಚಿವ  ವಿ.ನಾರಾಯಣ ಸ್ವಾಮಿ ಅವರೊಂದಿಗೆ ಯಾದವ್ ಅವರ ನಿವಾಸಕ್ಕೆ ಭೇಟಿ ನೀಡಿ  ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು.

`ನಮ್ಮ ಪಕ್ಷವು ಅವರಿಗೆ ಬೆಂಬಲ ನೀಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಲು ಮುಖರ್ಜಿ ನನ್ನನ್ನು ಭೇಟಿ ಮಾಡಲು ಬಂದಿದ್ದರು. ಅದರ ಹೊರತಾಗಿ ಬೇರೇನೂ ಇಲ್ಲ~ ಎಂದು ಶರದ್ ಯಾದವ್ ಸುದ್ದಿಗಾರರಿಗೆ  ತಿಳಿಸಿದರು.

 ಆದರೆ, ಮುಖರ್ಜಿ ಅವರು ಸುದ್ದಿಗಾರರೊಂದಿಗೆ ಮಾತನಾಡುವ ಗೋಜಿಗೆ ಹೋಗಲಿಲ್ಲ. `ಧನ್ಯವಾದ~ ಎಂದಷ್ಟೇ ಹೇಳಿ ತೆರಳಿದರು. ಮುಖರ್ಜಿ ಅವರ ಒಟ್ಟು ನಾಲ್ಕು ನಾಮಪತ್ರಗಳಲ್ಲಿ ಒಂದು ಪತ್ರಕ್ಕೆ  ಮೊದಲ ಸೂಚಕರಾಗಿ ಶರದ್‌ಯಾದವ್ ಮಂಗಳವಾರವಷ್ಟೇ ಸಹಿ ಹಾಕಿದ್ದರು.

ಮಾತುಕತೆ ವೇಳೆ ಸಂಸತ್‌ನಲ್ಲಿ ಶರದ್‌ಯಾದವ್ ಅವರೊಂದಿಗೆ ನಡೆಸಿದ್ದ ಕೆಲವು ವಾಗ್ವಾದದ ಘಟನೆಗಳನ್ನು ಪ್ರಣವ್ ಮುಖರ್ಜಿ ಸ್ಮರಿಸಿದರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.