ADVERTISEMENT

ಶಶಿಕಲಾ–ದಿನಕರನ್ ಚರ್ಚೆ

ಏಜೆನ್ಸೀಸ್
Published 5 ಜೂನ್ 2017, 19:07 IST
Last Updated 5 ಜೂನ್ 2017, 19:07 IST
ಶಶಿಕಲಾ–ದಿನಕರನ್ ಚರ್ಚೆ
ಶಶಿಕಲಾ–ದಿನಕರನ್ ಚರ್ಚೆ   

ಬೆಂಗಳೂರು: ತಮ್ಮ ನಿಷ್ಠ ಶಾಸಕರ ದಂಡಿನೊಂದಿಗೆ ಸೋಮವಾರ ಸಂಜೆ ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದ ಎಐಡಿಎಂಕೆ ನಾಯಕ ಟಿಟಿವಿ ದಿನಕರನ್‌, ತಮಿಳುನಾಡಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಪಕ್ಷದ ಮುಖ್ಯಸ್ಥೆ ವಿ.ಕೆ.ಶಶಿಕಲಾ ಅವರ ಜತೆ ಒಂದೂವರೆ ತಾಸಿಗೂ ಹೆಚ್ಚು  ಕಾಲ ಸಮಾಲೋಚನೆ ನಡೆಸಿದರು.

ದಿನಕರನ್ ಭೇಟಿಗೂ ಸ್ವಲ್ಪ ಸಮಯದ ಮುಂಚೆ ತೆಲಂಗಾಣದ ಕಾಂಗ್ರೆಸ್ ನಾಯಕಿ, ಚಿತ್ರನಟಿ ವಿಜಯಶಾಂತಿ ಅವರೂ ಕಾರಾಗೃಹಕ್ಕೆ ತೆರಳಿ ಶಶಿಕಲಾ ಅವರ ಯೋಗಕ್ಷೇಮ ವಿಚಾರಿಸಿ ಹೋಗಿದ್ದರು.

ಈ ಬೆಳವಣಿಗೆಗಳ ಮಧ್ಯೆಯೇ ಶಶಿಕಲಾ ಅವರಿಗೆ ಪೆರೋಲ್ ಸಿಕ್ಕಿದೆ ಎಂಬ ಮಾತುಗಳೂ ಕೇಳಿ ಬಂದವು. ಕೊನೆಗೆ, ‘ಪೆರೋಲ್‌ ಬೇಕೆಂದು ಅವರು ಅರ್ಜಿಯನ್ನೇ ಸಲ್ಲಿಸಿಲ್ಲ, ಇನ್ನು ಬಿಡುಗಡೆಯ ಮಾತೆಲ್ಲಿ’ ಎಂದು ಸ್ಪಷ್ಟಪಡಿಸುವ ಮೂಲಕ ಕಾರಾಗೃಹದ ಅಧಿಕಾರಿಗಳು ವದಂತಿಗೆ ತೆರೆ
ಎಳೆದರು.

ADVERTISEMENT

ಚುನಾವಣಾ ಆಯೋಗಕ್ಕೆ ಲಂಚದ ಆಮಿಷ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ತಿಂಗಳಿನಿಂದ ದೆಹಲಿಯ ತಿಹಾರ್‌ ಜೈಲಿನಲ್ಲಿದ್ದ ದಿನಕರನ್‌, ವಾರದ ಹಿಂದಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಜೈಲಿನಲ್ಲಿ ರಾಜಕೀಯ ಆಟ: ನಟ ರಜನೀಕಾಂತ್ ರಾಜಕೀಯ ಪ್ರವೇಶ, ಚುನಾವಣಾ ಆಯೋಗದ ಅಧಿಕಾರಿಗೆ ಲಂಚದ ಆಮಿಷ ಒಡ್ಡಿದ ಪ್ರಕರಣ, ಮುಂದೆ ಎದುರಾಗಲಿರುವ ಉಪಚುನಾವಣೆ, ತಮ್ಮ ಎದುರಾಳಿ ಪನ್ನೀರ್‌ ಸೆಲ್ವಂ ಮತ್ತು ಮುಖ್ಯಮಂತ್ರಿ ಪಳನಿಸ್ವಾಮಿ ಬಳಗದ ನಡುವಿನ ‘ರಾಜಕೀಯ ವ್ಯವಹಾರ’ದ ವಿಚಾರವಾಗಿ ದಿನಕರನ್ ಹಾಗೂ ಶಶಿಕಲಾ ಸುದೀರ್ಘ ಚರ್ಚೆ ನಡೆಸಿದರು ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.