ADVERTISEMENT

ಶಾಸಕನ ಅಪಹರಣ ಗಡುವು ವಿಸ್ತರಿಸಿದ ನಕ್ಸಲರು

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2012, 19:30 IST
Last Updated 15 ಏಪ್ರಿಲ್ 2012, 19:30 IST

ಕೊರಾಪುಟ್/ ಭುವನೇಶ್ವರ (ಪಿಟಿಐ): ಬಿಜೆಡಿ ಶಾಸಕ ಜಿನಾ ಹಿಕಾಕ ಅವರನ್ನು ಒತ್ತೆಯಾಳಾಗಿ ಇರಿಸಿಕೊಂಡಿರುವ ಮಾವೊವಾದಿಗಳು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಏಪ್ರಿಲ್ 10ರವರೆಗೆ ವಿಧಿಸಿದ್ದ ಗಡುವನ್ನು ಇದೇ 18ರವರೆಗೆ ವಿಸ್ತರಿಸಿದ್ದಾರೆ.

`ಜೈಲಿನಲ್ಲಿರುವ 29 ಮಾವೊವಾದಿಗಳನ್ನು ಬಿಡುಗಡೆಗೊಳಿಸುವ ಸಂಬಂಧ 18ರ ಸಂಜೆ 5 ಗಂಟೆಯವರೆಗೆ ಗಡುವನ್ನು ವಿಸ್ತರಿಸಿರುವುದಾಗಿ ಮಾವೊವಾದಿಗಳ ಆಂಧ್ರ ಒಡಿಶಾ ಗಡಿ ವಿಶೇಷ ವಲಯ ಸಮಿತಿಯ ಮುಖಂಡರು ಸರ್ಕಾರಕ್ಕೆ ಹೊಸ ಸಂದೇಶ ಕಳುಹಿಸಿದ್ದಾರೆ~ ಎಂದು ಬಂಡುಕೋರರ ಪರ ನ್ಯಾಯವಾದಿ ನಿಹಾರ್ ರಂಜನ್ ಪಟ್ನಾಯಕ್ ತಿಳಿಸಿದ್ದಾರೆ.

ಆದರೆ ಗಡುವು ವಿಸ್ತರಣೆ ಕುರಿತು ಒಡಿಶಾ ಸರ್ಕಾರ ಇನ್ನಷ್ಟೇ ಪ್ರತಿಕ್ರಿಯಿಸಬೇಕಾಗಿದೆ.

ಈ ಮುನ್ನ ಹಿಕಾಕ ಅವರ ಬಿಡುಗಡೆಗೆ ಪ್ರತಿಯಾಗಿ, ಬಂಧನದಲ್ಲಿರುವ ಮೂವತ್ತು ನಕ್ಸಲೀಯರ ಬಿಡುಗಡೆಗೆ ಕೋರಿದ್ದ ಬಂಡುಕೋರರು, ಕನಿಷ್ಠ 55 ಪೊಲೀಸರ ಸಾವಿಗೆ ಕಾರಣನಾಗಿರುವ ಚೆಂದ ಭೂಷಣಂ ಅಲಿಯಾಸ್ ಘಾಸಿ ಹೆಸರನ್ನು ಬೇಡಿಕೆಯ ಪಟ್ಟಿಯಿಂದ ಕೈಬಿಟ್ಟಿದ್ದಾರೆ ಎಂದು ಪಟ್ನಾಯಕ್ ತಿಳಿಸಿದ್ದಾರೆ.

ಘಾಸಿ ಬಿಡುಗಡೆಗೆ ಎಲ್ಲ ವಲಯಗಳಿಂದ ತೀವ್ರ ವಿರೋಧ ಕೇಳಿಬಂದಿತ್ತಲ್ಲದೆ ನಕ್ಸಲ್ ವಿರೋಧಿ ಚಟುವಟಿಕೆಯನ್ನು ಬಹಿಷ್ಕರಿಸುವುದಾಗಿ ಒಡಿಶಾ ಪೊಲೀಸ್ ಸಂಘಟನೆ (ಒಪಿಎ) ಬೆದರಿಕೆ ಹಾಕಿತ್ತು. ಇದೇ ವೇಳೆ ನಕ್ಸಲೀಯರಿಗೆ ಸಮನಾಗಿ ಒತ್ತೆಯಾಳುಗಳ ಬಿಡುಗಡೆ ಎಂಬ ತಮ್ಮ  ನಿಲುವಿಗೆ ಬದ್ಧರಾಗಿರುವ ಮಾವೊವಾದಿಗಳು, ಹಿಕಾಕ ಅವರನ್ನು ಬಿಡುಗಡೆ ಮಾಡಬೇಕಾದರೆ 29 ಮಾವೊವಾದಿಗಳು ಹಿಕಾಕ ಅವರ ಪತ್ನಿ ಕೌಸಲ್ಯ ಹಾಗೂ ನ್ಯಾಯವಾದಿಗಳ ಜೊತೆಯಲ್ಲಿಯೇ ಬರಬೇಕೆಂದು ಒತ್ತಾಯಿಸಿರುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ.

ಚಾಸಿ ಮುಳಿಯಾ ಆದಿವಾಸಿ ಸಂಘದ (ಸಿಎಂಎಎಸ್) 15 ಸದಸ್ಯರು, ಎಂಟು ನಕ್ಸಲೀಯರು ಸೇರಿದಂತೆ 23 ಮಂದಿಯನ್ನು ಬಿಡುಗಡೆಗೊಳಿಸಲು ಸರ್ಕಾರ ಒಪ್ಪಿಕೊಂಡಿದೆ. ಆದರೆ ಅವರೆಲ್ಲರನ್ನೂ ಸಂಪೂರ್ಣ ಆರೋಪ ಮುಕ್ತ ಮಾಡಬೇಕೆಂದು ಬಂಡುಕೋರರು ಪಟ್ಟು ಹಿಡಿದಿರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

ಈ ಮಧ್ಯೆ, ಜಾಮೀನು ಅರ್ಜಿಗಳನ್ನು ಸಲ್ಲಿಸುವಂತೆ ಮಾವೊವಾದಿಗಳ ನ್ಯಾಯವಾದಿಗಳು ಹಾಗೂ ಸಿಎಂಎಎಸ್ ಸದಸ್ಯರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನಗಳು ನಡೆಯುತ್ತಿವೆ, ಮಂಗಳವಾರದ ವೇಳೆಗೆ ಅವರು ಅರ್ಜಿ ಸಲ್ಲಿಸುವ ನಿರೀಕ್ಷೆ ಇದೆ ಎಂದು ರಾಜ್ಯ ಗೃಹ ಕಾರ್ಯದರ್ಶಿ ಯು.ಎನ್.ಬೆಹೆರಾ ತಿಳಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT