ನವದೆಹಲಿ (ಪಿಟಿಐ): ಹೆಚ್ಚು ಬೋಗಿಗಳಿರುವ ರೈಲುಗಳನ್ನು ಎಳೆಯುವ 5500 ಎಚ್.ಪಿ ಸಾಮರ್ಥ್ಯದ ಡೀಸೆಲ್ ಎಂಜಿನ್ `ಭೀಮ~ನನ್ನು ಬಳಕೆಗೆ ಸಮರ್ಪಿಸಲು ರೈಲ್ವೆ ಇಲಾಖೆ ಸಜ್ಜಾಗಿದೆ.ಗಂಟೆಗೆ ಗರಿಷ್ಠ 100 ಕಿ.ಮೀ. ವೇಗದಲ್ಲಿ ಸಂಚರಿಸುವ ಈ ಎಂಜಿನ್‌ನಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಅಳವಡಿಸಲಾಗಿದೆ.
ಪ್ರಸ್ತುತ ಈ ಎಂಜಿನ್ನಿನ ಸುರಕ್ಷತಾ ಪ್ರಯೋಗ ಈಗಾಗಲೇ ಆರಂಭವಾಗಿದೆ. ವಾರಾಣಸಿಯಲ್ಲಿರುವ ರೈಲ್ವೆ ಡೀಸೆಲ್ ಎಂಜಿನ್ ಕಾರ್ಖಾನೆಯಲ್ಲಿ 17 ಕೋಟಿ ರೂಪಾಯಿ ವೆಚ್ಚದಲ್ಲಿ ಇದನ್ನು ತಯಾರಿಸಲಾಗಿದೆ.
ಪ್ರಸ್ತುತ ರೈಲ್ವೆ ಇಲಾಖೆಯಲ್ಲಿ 4500 ಎಚ್.ಪಿ ಸಾಮರ್ಥ್ಯದ ಎಂಜಿನ್ನುಗಳಿದ್ದು, `ಭೀಮ~ದ ಅಳವಡಿಕೆಯೊಂದಿಗೆ ರೈಲುಗಳ ಸಾಗಣೆ ಸಾಮರ್ಥ್ಯ ಗಣನೀಯವಾಗಿ ಅಧಿಕವಾಗಲಿದೆ ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿ ಹೇಳಿದ್ದಾರೆ.
2012-13ರ ಹಣಕಾಸು ವರ್ಷದಲ್ಲಿ ಇಂತಹ 15 ಎಂಜಿನ್‌ಗಳನ್ನು ತಯಾರಿಸುವ ಗುರಿಯನ್ನು ಇಲಾಖೆ ಹೊಂದಿದೆ. ಇದೇ ವೇಳೆ ಈ ವರ್ಷದಲ್ಲಿ 102 ಕೋಟಿ ಟನ್ ಸರಕು ಸಾಗಣೆ ಗುರಿ ಹಾಕಿಕೊಂಡಿದೆ (ಕಳೆದ ವರ್ಷಕ್ಕಿಂತ 5.5 ಕೋಟಿ ಟನ್ ಹೆಚ್ಚು)ರೈಲ್ವೆ ಇಲಾಖೆಯು ಅಮೆರಿಕ ಮೂಲದ ಇಎಂಡಿ ಕಂಪೆನಿಯ ಸಹಯೋಗದಲ್ಲಿ ಈ ಎಂಜಿನ್ ಅಭಿವೃದ್ಧಿಪಡಿಸಿದೆ.
ಇದೇ ಮೊತ್ತಮೊದಲ ಬಾರಿಗೆ ರೈಲ್ವೆ ಚಾಲನಾ ಸಿಬ್ಬಂದಿಗಾಗಿ ಎಂಜಿನ್‌ನಲ್ಲಿ ಶೌಚಾಲಯದ ವ್ಯವಸ್ಥೆ ಕಲ್ಪಿಸಿರುವುದು ಇದರ ಮತ್ತೊಂದು ವಿಶೇಷ.ಎಲೆಕ್ಟ್ರಾನಿಕ್ ಆಧಾರಿಕ ಇಂಧನ ಪೂರೈಕೆ ವ್ಯವಸ್ಥೆ ಹಾಗೂ ಮಾಲಿನ್ಯ ನಿಯಂತ್ರಣ ವ್ಯವಸ್ಥೆಗಳನ್ನು ತನ್ನಲ್ಲಿ ಅಡಕಗೊಳಿಸಿಕೊಂಡಿರುವ ಈ ಎಂಜಿನ್ ಉತ್ತಮ ಇಂಧನ ದಕ್ಷತೆಯನ್ನೂ ಹೊಂದಿದೆ.
ಬಿಸಿಗಾಳಿಯನ್ನು ಹೊರದೂಡುವ ಹವಾನಿಯಂತ್ರಿತ ವ್ಯವಸ್ಥೆ, ಡಿಕ್ಕಿ ತಡೆ ಸಾಧನಗಳ ಅಳವಡಿಕೆ, ವಿಶಿಷ್ಟ ರೀತಿಯ ಚಾಲಕ ಆಸನಗಳನ್ನು ಇದು ಒಳಗೊಂಡಿದೆ ಎಂದು ಅಧಿಕಾರಿ ವಿವರಿಸಿದ್ದಾರೆ.ಇದರ ಇಂಧನ ಟ್ಯಾಂಕಿಗೆ ಒಂದೇ ಬಾರಿಗೆ 7500 ಲೀಟರ್ ಡೀಸೆಲ್ ತುಂಬಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.